ಕಣಿವೆ, ಏ. ೧೯: ‘ಏ ಮಾನವ ಕೇಳು, ನೀನು ಕೇವಲ ಐದಾರು ವರುಷಗಳ ಕಾಲ ನನ್ನನ್ನು ಸಾಕು. ನಿನ್ನನ್ನು ಜೀವನವಿಡೀ ಸಾಕುತ್ತೇನೆ. ಹೀಗೆ ಒಂದು ತೆಂಗಿನ ಮರ ಹೇಳುತ್ತೆ.’ ಹತ್ತು ಹಲವು ಕೃಷಿಗಳಲ್ಲಿ ತೆಂಗಿನ ಫಸಲು ವಿಶೇಷ. ಸಾಮಾನ್ಯವಾಗಿ ಹಳ್ಳಿಗಾಡು ಪ್ರದೇಶಗಳಲ್ಲಿ ತೆಂಗಿನ ತೋಟವನ್ನು ಹೊಂದಿರುವವರೇ ಸಿರಿವಂತರು ಎಂಬ ಅಭಿಪ್ರಾಯವು ಇದೆ.

ಏಕೆಂದರೆ ತೆಂಗಿನ ಗಿಡಗಳನ್ನು ನೆಟ್ಟ ಬಳಿಕದ ಆರೇಳು ವರ್ಷಗಳಲ್ಲಿ ಫಸಲು ಬಿಡುವ ತೆಂಗು ಒಂದು ರೀತಿ ಬೇಡಿದ್ದನ್ನೆಲ್ಲಾ ನೀಡುವ ಕಾಮಧೇನು ಕಲ್ಪವೃಕ್ಷ.

ಅಂದರೆ ಒಂದು ತೆಂಗಿನ ಮರವಿದ್ದರೆ, ಅದರಿಂದ ನಾನಾ ಪ್ರಯೋಜನಗಳಿವೆ. ತೆಂಗಿನ ಗರಿ ಶುಭ ಸಮಾರಂಭಕ್ಕೆ ಬಳಕೆಯಾದರೆ, ತೆಂಗಿನ ನಾರು ಪೊರಕೆಯಾಗಿ ಬಳಕೆಯಾಗುತ್ತದೆ. ತೆಂಗಿನ ಮರದ ಬುಡ ಮನೆಯ ತೊಲೆಯಾದರೆ, ಎಳನೀರು ಮತ್ತು ಕಾಯಿಗೆ ವಿಶೇಷ ಮಹತ್ವ ಇದೆ.

ಇತ್ತೀಚಿನ ವರ್ಷಗಳಲ್ಲಿ ತೆಂಗು ಕೃಷಿಯತ್ತ ಬಹಳಷ್ಟು ಮಂದಿ ತಲ್ಲೀನರಾಗುತ್ತಿದ್ದಾರೆ. ಬೇರೆ ಕೃಷಿಗಳಾದರೆ ಅದರ ಹಿಂದೆಯೇ ಬೀಳಬೇಕು. ಅಲ್ಲದೆ ಸಾಕಷ್ಟು ಶ್ರಮ ಹಾಗೂ ಹಣ ವಿನಿಯೋಗಿಸಬೇಕು ಎಂದುಕೊAಡು ದೀರ್ಘಾವಧಿಯ ಆದಾಯ ತರುವಂತಹ ಈ ತೆಂಗಿನ ಮರಗಳ ಬೆಳೆಯತ್ತ ಮಗ್ನರಾಗುತ್ತಿದ್ದಾರೆ.

ಈಗಾಗಲೇ ತೆಂಗು ಬೆಳೆದವರು ಗಗನದೆತ್ತರಕ್ಕೆ ಬೆಳೆದು ನಿಂತAತಹ ತೆಂಗಿನ ಮರಗಳಿಂದ ಎಳನೀರು ಹಾಗೂ ತೆಂಗಿನ ಕಾಯಿ ಕಟಾವು ಮಾಡಲು ಕಷ್ಟಸಾಧ್ಯವಾಗುವ ಕಾರಣ, ಎತ್ತರಕ್ಕೆ ಬೆಳೆದು ನಿಂತ ತೆಂಗಿನ ಮರಗಳಿಂದ ಎಳನೀರು ಹಾಗೂ ಕಾಯಿ ಕೀಳುವ ನೈಪುಣ್ಯವುಳ್ಳ ಮಂದಿಯ ಮೊರೆ ಹೋಗುತ್ತಾರೆ.

ಇಲ್ಲಿ ತೆಂಗಿನ ಮರಗಳನ್ನೇರಿ ಕಾಯಿ ಹಾಗೂ ಎಳನೀರು ಕಟಾವು ಮಾಡಿಕೊಡುವ ಕಾರ್ಮಿಕರಿಗೆ ಮರವೊಂದಕ್ಕೆ ತಲಾ ರೂ. ೧೦೦ರ ರಂತೆ ಒಪ್ಪಂದ ಮಾಡಿಕೊಳ್ಳುತ್ತಾರೆ. ಹೀಗೆ ಒಪ್ಪಂದ ಮಾಡಿಕೊಳ್ಳುವ ಮಂದಿ ಸರಾಗವಾಗಿ ಮರವೇರಿ, ಸಲೀಸಾಗಿ ಕಾಯಿ ಬಿಡಿಸಿ ದಿನವೊಂದಕ್ಕೆ ಕನಿಷ್ಟ ಎಂದರೆ ಎರಡರಿಂದ ಎರಡೂವರೆ ಸಾವಿರ ರೂ. ಹಣ ಸಂಪಾದನೆ ಮಾಡುತ್ತಾರೆ.

ಈ ಪೈಕಿ ಮರವೇರುವ ಕಾರ್ಮಿಕ ಕೆಂಚಯ್ಯ ಎಂಬವರು ಪತ್ರಿಕೆಯೊಂದಿಗೆ ಮಾತನಾಡಿ, ‘ನಾನು ಕಳೆದ ೨೫ ವರ್ಷಗಳಿಂದ ತೆಂಗಿನ ಮರಗಳನ್ನೇರಿ ಎಳನೀರು ಹಾಗೂ ತೆಂಗಿನ ಕಾಯಿ ಕೀಳುತ್ತಿದ್ದೇನೆ. ದಿನವೊಂದಕ್ಕೆ ಮೊದಲೆಲ್ಲಾ ಬೆಳಿಗ್ಗೆಯಿಂದ ಸಂಜೆವರೆಗೂ ೩೫ ರಿಂದ ೪೦ ತೆಂಗಿನ ಮರಗಳನ್ನು ಹತ್ತುತ್ತಿದ್ದೆ. ಆದರೆ ಈಗ ವಯಸ್ಸಾದ ಕಾರಣಕ್ಕೆ ೨೦ ರಿಂದ ೨೫ ಮರಗಳಿಗೆ ಏರಿ ಕಾಯಿ ಹಾಗೂ ಎಳನೀರು ಬಿಡಿಸುತ್ತೇನೆ. ಕೆಲವರು ಕೆಲಸವಾದೊಡನೆ ಕೂಲಿ ನೀಡುತ್ತಾರೆ. ಕೆಲವರು ಒಂದಷ್ಟು ಕಾಯಿಗಳನ್ನೇ ನನಗೆ ಮಾರಾಟ ಮಾಡುತ್ತಾರೆ.

ಆದರೆ ನಾನು ಮರವೇರುವಾಗ ಒಂದೇ ದೇವರಲ್ಲಿ ಪ್ರಾರ್ಥಿಸೋದು. ನಾನೇರುವ ಬಾನೆತ್ತರದ ಮರಗಳಲ್ಲಿ ಯಾವುದೇ ಕಾರಣಕ್ಕೂ ಕಣÀಜಗಳು, ನಾಗರ ಹಾವುಗಳು, ಹೆಜ್ಜೇನು ಹಾಗೂ ಕೆಂಪು ಇರುವೆಗಳು ಕಚ್ಚದಂತೆ ಕಾಪಾಡೆಂದು ಕೈಮುಗಿಯುತ್ತೇನೆ.

ತೆಂಗಿನ ಮರಗಳನ್ನು ಬೆಳೆಸಿರುವ ಹಲವರು ಎತ್ತರಕ್ಕೇರಿರುವ ತೆಂಗಿನ ಮರಗಳಲ್ಲಿ ಕಾಯಿ ಕೀಳುವುದೇ ಒಂದು ದುಸ್ಸಾಹಸ ಎಂದು ಹಾಗೆಯೇ ಮರಗಳಲ್ಲಿ ಬಿಟ್ಟು ಬಿಡುತ್ತಾರೆ.

ಪತ್ರಿಕೆಯೊಂದಿಗೆ ಪ್ರತಿಕ್ರಿಯಿಸಿದ ಭುವನಗಿರಿ ಗ್ರಾಮದ ಕೋಳಿಬೈಲು ವೆಂಕಟರಮಣ ಚಾಮಿ ತೆಂಗಿನ ಮರ ಹತ್ತುವ ಕೆಂಚಯ್ಯ, ಕಳೆದ ಐದಾರು ವರ್ಷಗಳಿಂದ ಬರುತ್ತಿದ್ದಾರೆ. ಇದೀಗ ಮೊದಲಿನಂತೆ ಕಷ್ಟ ಏನಿಲ್ಲ ನೋಡಿ. ಅದೆಂತದೋ ತೆಂಗಿನ ಮರ ಹತ್ತೋ ಯಂತ್ರ ಬಂದಿದೆ. ಅದರಲ್ಲಿ ಸರ ಸರನೆ ಹತ್ತಿ ಕಾಯಿ ಕಿತ್ತು ನಿರಾತಂಕವಾಗಿ ಕೆಳಗಿಳಿಯಬಹುದಾಗಿದೆ,

ಆದರೆ ಇಲ್ಲಿ ಎಲ್ಲರೂ ತೆಂಗಿನ ಮರವೇರೋದು ಅಸಾಧ್ಯ. ಸತತ ಅಭ್ಯಾಸ, ಪರಿಶ್ರಮ, ಏಕಾಗ್ರತೆ ಬೇಕಾಗುತ್ತದೆ. ತೆಂಗಿನ ಮರವೇರಲು ಸಹಾಯವಾಗಬಲ್ಲ ಚಿಕ್ಕ ಯಂತ್ರವನ್ನು ಖರೀದಿಸುವಾಗ ಅದನ್ನು ಮಾರಾಟ ಮಾಡುವವರು ಅಗತ್ಯ ಸಿದ್ಧತೆ ಹಾಗೂ ತರಬೇತಿಗಳ ಬಗ್ಗೆ ಮಾಹಿತಿ ನೀಡಿರುತ್ತಾರೆ.

ಮಾನವ ಜನ್ಮ ಅತೀ ಹೆಚ್ಚಾಗಿ ಶುಭ ಅಶುಭ ಕಾರ್ಯಗಳಿಗೆ ಬಳಸುವ ಈ ಕಾಮಧೇನು ಪರಿಕರಗಳ ಬೆಲೆ ಇಳಿಯೋದು ಬೇಡ.

- ಕೆ.ಎಸ್. ಮೂರ್ತಿ