ಕುಶಾಲನಗರ, ಏ. ೧೮: ನ್ಯಾಯೋಚಿತ ಬೇಡಿಕೆ ಈಡೇರಿಸುವಂತೆ ಮುಷ್ಕರ ನಡೆಸುತ್ತಿರುವ ಸಾರಿಗೆ ನೌಕರರ ಬಗ್ಗೆ ರಾಜ್ಯ ಸರ್ಕಾರ ಸರ್ವಾಧಿಕಾರಿ ಧೋರಣೆಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿ ಕೊಡಗು ಜನಾಂದೋಲನ ವೇದಿಕೆ ಕುಶಾಲನಗರದಲ್ಲಿ ಪ್ರತಿಭಟನೆ ನಡೆಸಿತು. ವೇದಿಕೆ ಜಿಲ್ಲಾ ಸಂಚಾಲಕ ವಿ.ಪಿ ಶಶಿಧರ್ ನೇತೃತ್ವದಲ್ಲಿ ಕುಶಾಲನಗರ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಸೇರಿದ ಕಾರ್ಯಕರ್ತರು ರಾಜ್ಯಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಶಿಧರ್, ಹಲವು ಹಂತದಲ್ಲಿ ಹೋರಾಟ ನಡೆದರೂ ಸರ್ಕಾರ ಬೇಡಿಕೆ ಈಡೇರಿಸುವಲ್ಲಿ ವಿಫಲವಾಗಿದೆ. ತಕ್ಷಣ ಸರ್ಕಾರ ಸ್ಪಂದಿಸಬೇಕೆAದು ಒತ್ತಾಯಿಸಿದರು.
ಸರಕಾರಕ್ಕೆ ಕುಶಾಲನಗರ ತಾಲೂಕು ಕಚೇರಿ ಮೂಲಕ ಮನವಿ ಪತ್ರ ಸಲ್ಲಿಸಿದರು. ಸಾರಿಗೆ ನೌಕರರ ಬೇಡಿಕೆ ಈಡೇರಿಸುವ ಮೂಲಕ ಹಾಗೂ ನೌಕರರ ಮೇಲೆ ಕೈಗೊಂಡ ಶಿಸ್ತು ಕ್ರಮ, ಮೊಕದ್ದಮೆಗಳನ್ನು ಕೈಬಿಡುವಂತೆ ಮನವಿಯಲ್ಲಿ ಕೋರಲಾಯಿತು. ಈ ಸಂದರ್ಭ ಶಿರಂಗಾಲ, ತೊರೆನೂರು ವ್ಯಾಪ್ತಿಯ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪ್ರಮುಖರಾದ ಚಂದ್ರಶೇಖರ್, ಶ್ರೀಕಾಂತ್, ರಮೇಶ್, ಶಾಂತಮ್ಮ, ಸಿ.ಎನ್ ಲೋಕೇಶ್, ಮಂಜುನಾಥ್, ಟಿ.ಜಿ. ಲೋಕೇಶ್, ನವೀನ್ ಮತ್ತಿತರರು ಇದ್ದರು.