ಸೋಮವಾರಪೇಟೆ, ಏ. ೧೮: ಕೊರೊನಾ ೨ನೇ ಅಲೆ ನಿರೀಕ್ಷೆಗೂ ಮೀರಿ ವ್ಯಾಪಿಸುತ್ತಿದ್ದು, ಸಾರ್ವಜನಿಕರು ಉದಾಸೀನತೆ ಬಿಟ್ಟು ಕೊರೊನಾ ವೈರಸ್ ಬಗ್ಗೆ ಹೆಚ್ಚಿನ ಜಾಗೃತಿ ವಹಿಸಬೇಕೆಂದು ತಾಲೂಕು ತಹಶೀಲ್ದಾರ್ ಗೋವಿಂದರಾಜು ಹೇಳಿದರು.
ಜಿಲ್ಲಾಧಿಕಾರಿಗಳ ನಿರ್ದೇಶನ ದಂತೆ ಸ್ಥಳೀಯ ಪ.ಪಂ. ವತಿಯಿಂದ ವರ್ತಕರಿಗೆ ಆಯೋಜಿಸಿದ್ದ ಜಾಗೃತಿ ಸಭೆಯಲ್ಲಿ ಮಾತನಾಡಿದ ಗೋವಿಂದ ರಾಜು ಅವರು, ಪಟ್ಟಣದಲ್ಲಿರುವ ಹೊಟೇಲ್, ಬಾರ್, ರೆಸ್ಟೋರೆಂಟ್, ಬೇಕರಿಗಳಲ್ಲಿ ಅಶುಚಿತ್ವ ಕಂಡು ಬಂದರೆ, ಸ್ಯಾನಿಟೈಸರ್, ಸಾಮಾಜಿಕ ಅಂತರ ಇಲ್ಲದಿದ್ದ ಪಕ್ಷದಲ್ಲಿ ಅಂತಹ ಹೊಟೇಲ್‌ಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇದರೊಂದಿಗೆ ಪರವಾನಗಿಯನ್ನೂ ರದ್ದುಪಡಿಸಲು ಕ್ರಮವಹಿಸಲಾಗುವುದು ಎಂದು ಎಚ್ಚರಿಸಿದರು.
ನಗರ ಪ್ರದೇಶದಲ್ಲಿ ಮಾಸ್ಕ್ ಧರಿಸದಿದ್ದರೆ ರೂ. ೨೫೦ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ರೂ. ೧೦೦ ದಂಡ ವಿಧಿಸಲಾಗುವುದು. ವರ್ತಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಅಂಗಡಿ ಮುಂಗಟ್ಟುಗಳಿಗೆ ಬರುವ ಗ್ರಾಹಕರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಕಡ್ಡಾಯವಾಗಿ ಮಾಸ್ಕ್ ಧರಿಸುವ ಬಗ್ಗೆ ತಿಳಿ ಹೇಳಬೇಕು. ಪ್ರಸ್ತುತ ನಿಯಮದ ಪ್ರಕಾರ ಮದುವೆ ಕಾರ್ಯಕ್ರಮಗಳನ್ನು ನಡೆಸುವವರು ಒಳಾಂಗಣವಾದರೆ ಗರಿಷ್ಠ ೨೦೦ ಹಾಗೂ ಹೊರಾಂಗಣ ವಾದರೆ ಗರಿಷ್ಠ ೫೦೦ ಮಂದಿಗೆ ಮಾತ್ರ ಅವಕಾಶ ಒದಗಿಸಬೇಕು. ಇದನ್ನು ಮೀರಿದರೆ ಆಯೋಜಕರ ವಿರುದ್ಧ ಮೊಕದ್ದಮೆ ದಾಖಲಿಸಲಾಗುವುದು ಎಂದರು.
ಪಟ್ಟಣದ ಹೊಟೇಲ್, ಬೇಕರಿ, ರೆಸ್ಟೋರೆಂಟ್‌ಗಳಲ್ಲಿ ಶುಚಿತ್ವ ಇಲ್ಲದಿದ್ದರೆ ಅಂತಹ ಮಾಲೀಕರ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸ ಲಾಗುವುದು ಎಂದು ತಾಲೂಕು ಆಹಾರ ಇಲಾಖಾ ಶಿರಸ್ತೇದಾರ್ ವಿನು ಎಚ್ಚರಿಸಿದರು. ಪ.ಪಂ. ಮುಖ್ಯಾಧಿಕಾರಿ ನಾಚಪ್ಪ ಮಾತನಾಡಿ, ಪಟ್ಟಣದ ಕೆಲವೊಂದು ಹೊಟೇಲ್ ಗಳಲ್ಲಿ ಒಬ್ಬರೇ ಕ್ಲೀನಿಂಗ್, ಸಪ್ಲೆöÊ, ಅಡುಗೆ ತಯಾರಿ ಮಾಡುತ್ತಿರುವ ಪ್ರಕರಣಗಳ ಬಗ್ಗೆ ಮಾಹಿತಿ ದೊರೆತಿದ್ದು, ಅಂತಹ ಹೊಟೇಲ್, ಕ್ಯಾಂಟೀನ್‌ಗಳ ಮೇಲೆ ಧಾಳಿ ನಡೆಸಿ, ಕ್ರಮ ವಹಿಸ ಲಾಗುವುದು. ವರ್ತಕರು ಹಾಗೂ ಸಾರ್ವಜನಿಕರು ಕಸವನ್ನು ವಿಂಗಡಿಸಿ ಪ.ಪಂ.ನ ವಾಹನಕ್ಕೆ ನೀಡಬೇಕು ಎಂದರು. ಆರೋಗ್ಯ ಇಲಾಖೆಯ ಅನಿತಾ ಮಾತನಾಡಿ, ಈಗಾಗಲೇ ೨ ಕಂಪೆನಿಗಳ ವ್ಯಾಕ್ಸಿನ್ ಲಭ್ಯವಿದ್ದು, ೪೫ ವರ್ಷ ಮೇಲ್ಪಟ್ಟವರು ಆಸ್ಪತ್ರೆಗೆ ಬಂದು ಲಸಿಕೆ ಪಡೆಯಬೇಕು. ಸರ್ಕಾರ ಕಾಲಬುಡಕ್ಕೆ ವ್ಯಾಕ್ಸಿನ್ ಕೊಟ್ಟರೂ ಅದನ್ನು ಪಡೆಯಲು ಸಾರ್ವಜನಿಕರು ಮುಂದಾಗ ದಿರುವುದು ದುರಂತ. ಲಸಿಕೆಯಿಂದ ಆರೋಗ್ಯದ ಮೇಲೆ ಯಾವುದೇ ಅಡ್ಡಪರಿಣಾಮ ಬೀರುವುದಿಲ್ಲ. ಈ ಬಗ್ಗೆ ಅಪಪ್ರಚಾರಕ್ಕೆ ಯಾರೂ ಕಿವಿಗೊಡಬಾರದು ಎಂದು ಮನವಿ ಮಾಡಿದರು.
ಸಭೆಯ ಅಧ್ಯಕ್ಷತೆಯನ್ನು ಪ.ಪಂ. ಅಧ್ಯಕ್ಷೆ ನಳಿನಿ ಗಣೇಶ್ ವಹಿಸಿದ್ದರು. ಉಪಾಧ್ಯಕ್ಷ ಬಿ. ಸಂಜೀವ, ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಂತಿ ಶಿವ ಕುಮಾರ್, ಪ.ಪಂ. ಅಧಿಕಾರಿಗಳು, ವರ್ತಕರು ಉಪಸ್ಥಿತರಿದ್ದರು