ಯಾವ ಅಪಾಯದ ದಿನಗಳು ಬರಬಾರದು ಎಂದು ಪ್ರಾರ್ಥಿಸಿದ್ದೇವೋ

ಅದೀಗ ನಮ್ಮ ಮುಂದೆಯೇ ಬಂದು ನಿಂತು ಬಿಟ್ಟಿದೆ.

ಯಾವ ದುರಂತ ದೃಶ್ಯಗಳನ್ನು ಕಾಣಬಾರದು ಎಂದುಕೊAಡಿದ್ದೆವೋ..

ಆ ದೃಶ್ಯಗಳು ಸಾಲು ಸಾಲಾಗಿ ಕಣ್ಣ ಮುಂದೆ ಸಾಗುತ್ತಿವೆ.

ಬೆಂಗಳೂರು ಎಂಬ ಕರ್ನಾಟಕದ ರಾಜಧಾನಿಯ ರಸ್ತೆಯಲ್ಲಿಯೇ ಸಾಲು ಸಾಲು ಹೆಣಗಳು..

ಕೊರೊನಾ ಎಂಬ ಕಣ್ಣಿಗೆ ಕಾಣದ ವೈರಾಣು ಮತ್ತೊಮ್ಮೆ ಎರಡನೇ ಅಲೆ ಹೆಸರಿನಲ್ಲಿ ಪ್ರಕೋಪ ತೋರತೊಡಗಿದೆ.

ಬೆಂಗಳೂರಿನಲ್ಲಿಯೇ ಪ್ರತೀ ೭ ನಿಮಿಷಕ್ಕೊಂದು ಕೊರೊನಾ ಸೋಂಕು ಪ್ರಕರಣ ವರದಿಯಾಗುತ್ತಿದೆ.

ಹೆಣ ಸುಡಲೂ ಸೌದೆಯಿಲ್ಲ. ಶವಕ್ಕೆ ಬೆಂಕಿ ಇಡಲೂ ಜಾಗವಿಲ್ಲ.. ಆಸ್ಪತ್ರೆಗಳಲ್ಲಿ ಲಕ್ಷ ರೂಪಾಯಿ ಕೊಟ್ಟರೂ ಹಾಸಿಗೆ ಸಿಗುತ್ತಿಲ್ಲ..

ಕಳೆದ ವರ್ಷ ಕೊರೊನಾ ಸೋಂಕಿನ ಸಂಖ್ಯೆ ಕಡೆಮೆಯಿದ್ದಾಗ ತೆಗೆದುಕೊಂಡ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳು ಈ ಬಾರಿ ಗಾಳಿ ಪಾಲಾಗಿವೆ.

ಗಾಳಿಯಲ್ಲಿಯೂ ಕೊರೊನಾ ಸೋಂಕು ಹಬ್ಬುತ್ತಿದೆ ಎಂಬ ವಿದೇಶಿ ಸಂಶೋಧಕರ ವರದಿ ಗಾಬರಿ ಹುಟ್ಟಿಸಿದೆ.

ಸಂಕಷ್ಟ ಮತ್ತು ಎಚ್ಚರ - ಎರಡರ ಮಧ್ಯೆ ಆಯ್ಕೆ ಮಾಡಿಕೊಳ್ಳುವ ಸ್ಥಿತಿ ಎದುರಾಗಿದೆ.

ಕಳೆದ ವರ್ಷ ಕೊರೊನಾ ಸೋಂಕು ವರದಿಯಾದಾಗ ಎಷ್ಟೆಲ್ಲಾ ಎಚ್ಚರಿಕೆ ವಹಿಸಿದ್ದೆವು. ಮನೆಯಲ್ಲಿಯೇ ಉಳಿದು ಕೊರೊನಾದಿಂದ ಪಾರಾಗಿದ್ದೆವು. ಲಾಕ್‌ಡೌನ್‌ನಿಂದ ಪ್ರತಿಯೋರ್ವರಿಗೂ ಆರ್ಥಿಕ ಸಮಸ್ಯೆ ಕಾಡಿದರೂ ಜೀವ ಮತ್ತು ಜೀವನ ಮುಖ್ಯ ಎಂದು ಸಂಕಷ್ಟ ಸಹಿಸಿಕೊಂಡೆವು. ಜಾಗಟೆ ಹೊಡೆದು, ಚಪ್ಪಾಳೆ ತಟ್ಟಿ, ಆರತಿ ಬೆಳಗಿ, ಮಾಸ್ಕ್ ಧರಿಸಿ, ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಎಲ್ಲಾ ರೀತಿಯಲ್ಲಿಯೂ ಕೊರೊನಾ ಸೋಂಕಿಗೆ ನಮ್ಮ ನಡುವೆ ಆಕ್ರಮಣ ಮಾಡಲು ಅವಕಾಶವನ್ನೇ ನೀಡದಷ್ಟು ಪ್ರಬಲ ಮತ್ತು ಪರಿಣಾಮಕಾರಿ ಪ್ರತಿರೋಧ ತೋರಿದೆವು.

ಹೀಗಾಗಿಯೇ ಕಳೆದ ವರ್ಷಾಂತ್ಯದಲ್ಲಿ ಕೊರೊನಾ ಎಂಬ ವೈರಾಣುವನ್ನು ಸ್ವಲ್ಪ ಮಟ್ಟಿಗಾದರೂ ಹಿಮ್ಮೆಟ್ಟಿಸಿ ಇನ್ನೇನು ಕೊರೊನಾ ಮುಕ್ತ ದಿನಗಳ ಆಶಾಭಾವನೆಗೆ ಕಾರಣವಾದೆವು.

ಈ ವರ್ಷದ ಫೆಬ್ರವರಿ ತಿಂಗಳು - ಭಾರತದ ಕೋವಿಡ್ ಸೋಂಕಿತರ ಸಂಖ್ಯೆ ದಿನಕ್ಕೆ ಕೇವಲ ೮ ಸಾವಿರ. ಕೊರೊನಾ ದೇಶದಲ್ಲಿ ವರದಿಯಾದ ನಂತರದ ಅತ್ಯಂತ ಕನಿಷ್ಟ ಸಂಖ್ಯೆ ಇದು.

ಅದೇ ಏಪ್ರಿಲ್ ೧೭ - ದೇಶದಲ್ಲಿ ಒಂದೇ ದಿನದ ಕೊರೊನಾ ಸೋಂಕಿನ ಸಂಖ್ಯೆ ೨.೫೬ ಲಕ್ಷ...!!! ಇಡೀ ಜಗತ್ತಿನಲ್ಲಿ ಅಮೇರಿಕಾ ಹೊರತುಪಡಿಸಿದರೆ ಅತ್ಯಂತ ಹೆಚ್ಚಿನ ಸೋಂಕು ಇರುವ ದೇಶಗಳ ಪೈಕಿ ಭಾರತಕ್ಕೆ ಎರಡನೇ ಸ್ಥಾನ. ಕೊರೊನಾ ವರದಿಯಾದ ೨೦೨೦ ರ ಮಾರ್ಚ್ನಲ್ಲಿ ೨೭ ನೇ ಸ್ಥಾನದಲ್ಲಿದ್ದ ಭಾರತ ಈಗ ೨ ನೇ ಸ್ಥಾನಕ್ಕೆ ಅಪಾಯದ ಮಟ್ಟಕ್ಕೆ ಬಂದು ನಿಂತಿದೆ.

ಮೂರು ತಿಂಗಳ ಹಿಂದೆಯಷ್ಟೇ ಇಡೀ ಜಗತ್ತಿಗೇ ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ

(ಮೊದಲ ಪುಟದಿಂದ) ಲಸಿಕೆ ಕಂಡುಹಿಡಿದ ಸಾಧನೆಯೊಂದಿಗೆ , ಕೇಳಿದ ದೇಶಕ್ಕೆಲ್ಲಾ ಲಸಿಕೆ ವಿತರಿಸಿದ್ದೇವೆ. ಇಂಥ ಲಸಿಕೆ ಇರುವ ದೇಶದಲ್ಲಿಯೇ ಈಗ ಕೊರೊನಾ ತುರ್ತು ಪರಿಸ್ಥಿತಿ... ಏನೀ ದುರಂತ ಸ್ಥಿತಿ?

ವಿಶ್ವದಲ್ಲಿ ಈವರೆಗೆ ೭೦೦ ಮಿಲಿಯನ್ ಕೊರೊನಾ ಸೋಂಕು ಪ್ರಕರಣ ವರದಿಯಾಗಿದೆ. ಕೊರೊನಾದಿಂದಾಗಿ ೩೦ ಲಕ್ಷ ಜನ ಸಾವನ್ನಪ್ಪಿದ್ದಾರೆ. ಹೀಗಿದ್ದರೂ ಕೊರೊನಾ ಹುಟ್ಟಿಗೆ ನಿಖರ ಕಾರಣ ತಿಳಿದಿಲ್ಲ. ಕೊರೊನಾ ನಿಯಂತ್ರಣಕ್ಕೆ ಸಮರ್ಪಕ ವಿಧಾನ ಗೊತ್ತಿಲ್ಲ. ಲಸಿಕೆ ತೆಗೆದುಕೊಂಡರೂ ಸೋಂಕು ಯಾಕೆ ಬರುತ್ತಿದೆ ಎಂಬ ಪ್ರಶ್ನೆಗೆ ನಿಖರ ಕಾರಣ ಗೊತ್ತಿಲ್ಲ. ನಮ್ಮ ದೇಹದಲ್ಲಿ ಲಸಿಕೆಯ ಪರಿಣಾಮ ಎಷ್ಟು ದಿನ ಇರುತ್ತದೆ ಗೊತ್ತಿಲ್ಲ. ಎಲ್ಲಿಯವರೆಗೆ ಲಸಿಕೆ ದೇಹದಲ್ಲಿ ಪರಿಣಾಮ ಬೀರುತ್ತದೆ ಎಂದೂ ಗೊತ್ತಿಲ್ಲ. ಕೊರೊನಾ ಸೋಂಕು ಶಾಶ್ವತವಾಗಿ ತೊಲಗುವುದು ಯಾವಾಗ. ಯಾವ ಭವಿಷ್ಯಕಾರನೂ ಹೇಳುತ್ತಿಲ್ಲ..

ಇಷ್ಟಕ್ಕೂ ಈಗ ಕಂಡು ಬಂದಿರುವುದು ಕೊರೊನಾದ ಎರಡನೇ ಅಲೆ ಹೌದಾದರೆ ಇಂಥ ಅಲೆಗಳು ಇನ್ನೂ ಎಷ್ಟು ಇವೆ ಎಂದು ಊಹಿಸಲೇ ಸಾಧ್ಯವಾಗುತ್ತಿಲ್ಲ.

ಈ ವರ್ಷದ ಪ್ರಾರಂಭದಲ್ಲಿ ಮಾರ್ಚ್ನಲ್ಲಿ ಎರಡನೇ ಅಲೆ ಬಂದರೂ ಬರಬಹುದು ಎಂದು ಊಹೆ ಮೇಲೆ ಹೇಳಿದ್ದ ರಾಜ್ಯ ಆರೋಗ್ಯ ಸಚಿವರು ಇದೀಗ ರಾಜ್ಯದಲ್ಲಿ ಪರಿಸ್ಥಿತಿ ಕೈಮೀರಿದೆ; ಸಮುದಾಯಕ್ಕೆ ಕೊರೊನಾ ಸೋಂಕು ಹರಡಿದೆ ಎಂಬ ಆತಂಕಕಾರಿ ವಿಚಾರವನ್ನು ಹೇಳಿದ್ದಾರೆ.

ಉಸಿರಾಟದ ಸಮಸ್ಯೆ ಇರುವವರಿಗೆ ಜಂಬೋ ಸಿಲಿಂಡರ್ ಮೂಲಕ ಕೃತಕ ಅನಿಲ ನೀಡಲಾಗುತ್ತಿದೆ. ಇಷ್ಟೆಲ್ಲಾ ಪ್ರಯತ್ನಗಳ ನಡುವೇ ಪ್ರತೀ ನಿತ್ಯ ೧೦೦ಕ್ಕೆ ಕಮ್ಮಿಯಿಲ್ಲದಂತೆ ಜೀವಗಳು ಕೊನೆಯಾಗುತ್ತಿವೆ. ಸಂಬAಧಿಕರು ಅಂತ್ಯ ಸಂಸ್ಕಾರ ಹೋಗಲಿ ಹೆಣಗಳನ್ನು ಶವಾಗಾರಕ್ಕೆ ತಲುಪಿಸಲೇ ಹೆಣಗಾಡುತ್ತಿದ್ದಾರೆ.

ಕೊರೊನಾ ತೊಲಗಿತು ಎಂದು ಸಂಭ್ರಮದಿAದ ಪಾರ್ಟಿ ಮಾಡಿದವರು, ಮಾಸ್ಕ್ ಬೆಂಕಿಗೆ ಹಾಕಿ ಸುಟ್ಟವರು ಈಗ ಮುಖ ಮುಚ್ಚಿಕೊಳ್ಳಲು ಪರದಾಡುತ್ತಿದ್ದಾರೆ.

ಸ್ಯಾನಿಟೈಸರ್ ಹುಡುಕಾಡತೊಡಗಿದ್ದಾರೆ

ಜಗತ್ತಿನ ಉಳಿದೆಲ್ಲಾ ದೇಶಗಳಿಗೆ ಹೋಲಿಸಿದರೆ ಕಳೆದ ವರ್ಷ ಕೊರೊನಾ ಸೋಂಕನ್ನು ಅತ್ಯಂತ ಸಮರ್ಥವಾಗಿ ಎದುರಿಸಿದ ದೇಶ ಭಾರತ. ನಮ್ಮ ದೇಶ ಕೊರೊನಾ ವಿರುದ್ಧ ತಳೆದ ಕಠಿಣ ನಿಲುವುಗಳಿಗೆ ಅನೇಕ ರಾಷ್ಟçಗಳು ಮೆಚ್ಚುಗೆ ಸೂಚಿಸಿದ್ದವು.

ಆದರೆ ಎರಡನೇ ಅಲೆಯನ್ನು ನಿಭಾಯಿಸಲು ಭಾರತ ಪರದಾಡುತ್ತಿರುವ ರೀತಿಗೆ ಎಲ್ಲಾ ಕಡೆ ಟೀಕೆ ವ್ಯಕ್ತವಾಗುತ್ತಿದೆ. ಭಾರತಕ್ಕೆ ಏನಾಗಿದೆ.. ಇಷ್ಟು ನಿರ್ಲಕ್ಷö್ಯದಿಂದ ಈ ದೇಶ ಯಾಕೆ ವರ್ತಿಸುತ್ತಿದೆ ಎಂದು ಇತರ ದೇಶಗಳು ಪ್ರಶ್ನಿಸುವಂತಾಗಿದೆ.

ಇದು ಯಾಕೆ ಆಯಿತೆಂದರೆ,,

ಕೊರೊನಾದ ಮೊದಲ ಅಲೆ ಬಂದಾಗ ಅದಕ್ಕೆ ಚೀನಾ ದೇಶವನ್ನೇ ಹೊಣೆ ಮಾಡಲಾಯಿತು. ಚೀನಾವನ್ನು ಹಿಗ್ಗಾಮುಗ್ಗಾ ಟೀಕಿಸಿದ್ದಾಯಿತು..

ಆದರೀಗ ಎರಡನೇ ಅಲೆಗೆ ಚೀನಾ ಕಾರಣವೇ?

ಖಂಡಿತಾ ಅಲ್ಲ. ಈ ದುಸ್ಥಿತಿಗೆ ಭಾರತದ ಜನರೇ ಕಾರಣರೇ ಹೊರತು ಬೇರಾರು ಅಲ್ಲ. ಬೇರೆಯವರನ್ನು ದೂಷಿಸಿ ಪ್ರಯೋಜನವೂ ಇಲ್ಲ. ಅದಕ್ಕೆ ಸಮರ್ಥನೆ ಕೂಡ ಸಿಗುವುದಿಲ್ಲ.

ಮೊದಲ ಅಲೆಯ ಗಂಭೀರ ಪಾಠವನ್ನು ನಾವು ತಿಳಿದುಕೊಳ್ಳುವಲ್ಲಿ ವಿಫಲವಾದೆವು. ಕೊರೊನಾದಿಂದ ಉಂಟಾಗುವ ಭೀಕರತೆ ಕಣ್ಣಿಗೆ ಕಂಡಿತೇ ವಿನಾ ಮನಸ್ಸಿಗೆ ತಾಗಲೇ ಇಲ್ಲ. ಹೀಗಾಗಿ ಇದೀಗ ಎಲ್ಲವನ್ನೂ ನಿರ್ಲಕ್ಷö್ಯ ಮಾಡಿದೆವು.

ಮುಖ ಬೆವರುತ್ತೆ ಎಂದು ಮಾಸ್ಕ್ ಕೆಳಗಿಟ್ಟೆವು. ಪದೇ ಪದೇ ಕೈ ತೊಳೆಯುವುದರಿಂದ ಕೈ ನೋವಾಗುತ್ತೆ ಎಂದು ಸ್ಯಾನಿಟೈಸರ್ ಮುಟ್ಟದೇ ಹೋದೆವು.

ಬಂಧುಗಳಿಗೆ ಬೇಸರವಾಗುತ್ತದೆ ಎಂದು ವಿವಾಹ ಸಮಾರಂಭಗಳಿಗೆ ಗುಂಪು ಗುಂಪಾಗಿ ತೆರಳಿದೆವು. ಗೆಳೆಯರಿಗೆ ನೋವಾಗಬಾರದು ಎಂದು ಸಾಮಾಜಿಕ ಅಂತರ ಇಲ್ಲದೆ ಸಂಭ್ರಮಿಸಿದೆವು. ಸಭೆ, ಸಮಾರಂಭಗಳನ್ನು ಎಚ್ಚರಿಕೆಯಿಂದ ನಿಭಾಯಿಸಿ ಎಂದರೆ ಸರ್ಕಾರಕ್ಕೆ ಬೇರೆ ಕೆಲಸ ಇಲ್ಲ ಎಂದು ಧೂಷಿಸುತ್ತಾ ಸಾವಿರಾರು ಜನ ಸೇರಿಸಿ ಕಾರ್ಯಕ್ರಮ ಆಯೋಜಿಸಿದೆವು..

ಚುನಾವಣೆ ನೆಪದಲ್ಲಿ ಮತಯಾಚನೆಗೆ ನೂರಾರು ಮಂದಿ ಒಟ್ಟುಗೂಡಿ ಹೋದೆವು. ಕೈ ಕುಲಕದಿರಿ. ನಮಸ್ಕಾರ ಮಾಡಿ ಎಂದರೆ, ಅದೆಲ್ಲಾ ಗೊಡ್ಡು ಪದ್ಧತಿ ಎಂದು ಬೇಕು ಬೇಕೆಂದೇ ಹಠದಲ್ಲಿ ಕೈ ಕುಲುಕಿದೆವು.

ಎಲ್ಲದರ ಪರಿಣಾಮ ಮತ್ತೆ ಎರಡನೇ ಅಲೆಯಾಗಿ ಸೋಂಕು ಧಾಳಿಯಿಟ್ಟಿದೆ. ಚೀನಾವನ್ನು ದೂಷಿಸಬೇಕೇ? ನಮ್ಮನ್ನು ನಾವೇ ಹೊಣೆ ಮಾಡಬೇಕೇ?

ಕೊನೇ ಹನಿ

ಮದುವೆ ಬೇಕು, ಮಾಸ್ಕ್ ಬೇಡ... ಕಾರ್ಯಕ್ರಮ ಬೇಕು.. ಸಾಮಾಜಿಕ ಅಂತರ ಬೇಡ.. ಸಭೆ ಬೇಕು.. ಸ್ಯಾನಿಟೈಸರ್ ಬೇಡ.. ಜನಜಂಗುಳಿ ಬೇಕೇಬೇಕು.. ಕೊರೊನಾ ಸೋಂಕು ಮಾತ್ರ ಬೇಡ???

ಹೇಗೆ ಸಾಧ್ಯ?

ಅರೆ ಕ್ಷಣ ಯೋಚಿಸಿ.. ನಮ್ಮೆಲ್ಲರ ತಪ್ಪಿನಿಂದಾಗಿ ಜೀವನವನ್ನೇ ಕೊರೊನಾ ಸೋಂಕಿಗೆ ಬಲಿಕೊಟ್ಟಿದ್ದಾರೆ. ಇಡೀ ಸಂಸಾರದ ಸುಖವೇ ತ್ಯಾಗವಾಗಿದೆ.

ಹೀಗಿರುವಾಗ ಕೆಲವೇ ಕೆಲವು ದಿನ... ಮದುವೆ, ಹುಟ್ಟು ಹಬ್ಬ, ಸಭೆ, ಸಮಾರಂಭ, ಬಹಿರಂಗ ಗೋಷ್ಠಿ ಇವೆಲ್ಲಾ ತ್ಯಾಗ ಮಾಡಲು ಸಾಧ್ಯ ಇಲ್ಲವೇ??

ಮುಂದಿನ ದಿನಗಳು ಸುಖಮಯವಾಗಿ ಇರಬೇಕೆಂದರೆ.. ಈಗಲೇ ನಿರ್ಧರಿಸಿ...

ನೆನಪಿಡಿ..... ಮುಖದ ಮೇಲಿನ ಮಾಸ್ಕ್ ಬಟ್ಟೆ ಸಣ್ಣದು...... ಶವದ ಮೇಲೆ ಹಾಸುವ ಬಟ್ಟೆ ದೊಡ್ಡದು.. ಇವುಗಳ ನಡುವಿನ ಆಯ್ಕೆ ನಿಮ್ಮದು...

- ಎಚ್.ಟಿ. ಅನಿಲ್