ವೀರಾಜಪೇಟೆ, ಏ. ೧೮: ಬೀಟೆ ಮರದ ನಾಟಗಳನ್ನು ಅಕ್ರಮವಾಗಿ ಸಾಗಿಸಲು ಯತ್ನಿಸಿದ ಆರೋಪಿಯನ್ನು ಮಾಲು ಸಹಿತ ವಶಕ್ಕೆ ಪಡೆದುಕೊಳ್ಳಲಾಗಿದೆ.

ಮೂರ್ನಾಡಿನ ಗಾಂಧಿ ನಗರದ ನಿವಾಸಿ ತನ್ವೀರ್ ಪಿ.ಎನ್. (೩೪) ಬಂಧಿತ ಆರೋಪಿ. ವೀರಾಜಪೇಟೆ ತಾಲೂಕು ಮಾಲ್ದಾರೆ ಕಳ್ಳಲದಲ್ಲಿ ಬೀಟೆ ಮರವೊಂದನ್ನು ಕಡಿದು ಕಾರಿನಲ್ಲಿ ಮೈಸೂರಿಗೆ ಸಾಗಿಸಲು ಯತ್ನಿಸಿದ ಸಂದರ್ಭ ವೀರಾಜಪೇಟೆ ತಾಲೂಕು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿ ಅಂದಾಜು ರೂ. ೨ ಲಕ್ಷ ಮೌಲ್ಯದ ಬೀಟೆ ಮರದ ನಾಟ ಹಾಗೂ ಕಾರನ್ನು ವಶಪಡಿಸಿಕೊಂಡು ಪೊನ್ನಂಪೇಟೆ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಅರಣ್ಯ ಘಟಕದ ಪೊಲೀಸ್ ಅಧೀಕ್ಷಕ ಸುರೇಶ್ ಬಾಬು ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವೀರಾಜಪೇಟೆ ಸಿಐಡಿ ಸಂಚಾರಿ ದಳದ ಆರಕ್ಷಕ ಉಪನಿರೀಕ್ಷಕಿ ವೀಣಾ ನಾಯಕ್, ಸಿಬ್ಬಂದಿಗಳಾದ ಕೆ.ಬಿ. ಸೋಮಣ್ಣ, ಟಿ.ಪಿ. ಮಂಜುನಾಥ್, ಪಿ.ಬಿ. ಮೊಣ್ಣಪ್ಪ, ಎಂ.ಬಿ. ಗಣೇಶ್, ಎಸ್.ಎಂ. ಯೋಗೇಶ್ ಇದ್ದರು.