ಸೋಮವಾರಪೇಟೆ,ಏ.೧೬: ಬೆಳಗ್ಗಿನಿಂದಲೂ ಬಿಸಿಲು, ನಡು ನಡುವೆ ಮೋಡದ ವಾತಾವರಣ ಇದ್ದ ಸೋಮವಾರಪೇಟೆ ವ್ಯಾಪ್ತಿಯಲ್ಲಿ ಸಂಜೆ ವೇಳೆಗೆ ಗುಡುಗು ಸಹಿತ ಮಳೆಯಾಯಿತು.
ಕಳೆದ ನಾಲ್ಕು ದಿನಗಳಿಂದಲೂ ಆಗಾಗ್ಗೆ ಮಳೆಯಾಗುತ್ತಿರುವ ಈ ವ್ಯಾಪ್ತಿಯಲ್ಲಿ ಇಂದು ಸಂಜೆ ೫.೩೦ರ ಸುಮಾರಿಗೆ ಗುಡುಗು, ಮಿಂಚಿನ ಆರ್ಭಟದೊಂದಿಗೆ ಮಳೆ ಸುರಿಯಿತು. ಬಿಸಿಲ ಬೇಗೆಯಿಂದ ಬಿಸಿಯೇರಿದ್ದ ವಾತಾವರಣ ತಂಪಾಯಿತು. ನೀರಿಲ್ಲದೇ ಒಣಗುತ್ತಿರುವ ಕಾಫಿ ಗಿಡಗಳಿಗೆ ಮಳೆ ಜೀವ ತುಂಬಿದರೆ, ಇನ್ನೂ ಕೊಯ್ಲಿಗೆ ಬಾಕಿಯಿರುವ ಕರಿಮೆಣಸು ಫಸಲಿಗೆ ಒಂದಷ್ಟು ಹಾನಿಯುಂಟು ಮಾಡಿತು.
ಹೊತ್ತಿ ಉರಿದ ತೆಂಗಿನಮರ: ಇಲ್ಲಿನ ನ್ಯಾಯಾಲಯದ ಸಮೀಪ ಇರುವ ತೆಂಗಿನ ಮರಕ್ಕೆ ಸಿಡಿಲು ಬಡಿದು ಬೆಂಕಿ ಹೊತ್ತಿಕೊಂಡಿತು. ಫಸಲು ಇದ್ದ ತೆಂಗಿನ ಮರಕ್ಕೆ ಭಾರೀ ಶಬ್ದದೊಂದಿಗೆ ಸಿಡಿಲು ಬಡಿದಿದ್ದರಿಂದ ಅಕ್ಕ ಪಕ್ಕದ ನಿವಾಸಿಗಳು, ದಾರಿಹೋಕರು ಭಯಭೀತರಾದರು. ಸಂಜೆಯಿAದ ರಾತ್ರಿಯವರೆಗೂ ತೆಂಗಿನ ಮರದಲ್ಲಿ ಬೆಂಕಿ ಉರಿಯಿತು.