ನಾಪೋಕ್ಲು: ಸಮೀಪದ ಯವಕಪಾಡಿ ಗ್ರಾಮದಲ್ಲಿ ಸುರಿದ ಭಾರಿ ಗಾಳಿ ಮಳೆಗೆ ಅಲ್ಲಲ್ಲಿ ಹಾನಿ ಸಂಭವಿಸಿದೆ. ಯವಕಪಾಡಿ ಗ್ರಾಮದ ನಾಲ್ಕು ನಾಡು ಅರಮನೆಯ ಸಮೀಪ ಬಿರುಸಿನ ಮಳೆ ಸುರಿದಿದ್ದು ಇಲ್ಲಿನ ನಿವಾಸಿ ಕುಡಿಯರ ಗಣೇಶ್ ಎಂಬವರ ಶೌಚಾಲಯದ ಶೀಟ್ಗಳ ಮೇಲೆ ದೊಡ್ಡ ಗಾತ್ರದ ಕಲ್ಲೊಂದು ಉರುಳಿ ಬಿದ್ದಿದ್ದು ಶೌಚಾಲಯದ ಹೆಂಚುಗಳು ಹೊಡೆದು ಅಪಾರ ನಷ್ಟ ಸಂಭವಿಸಿದೆ. ಉರುಳಿ ಬಂದ ಕಲ್ಲು ಭಾರಿ ಶಬ್ದದೊಂದಿಗೆ ಬಿದ್ದುದರಿಂದ ಮನೆಯವರು ಭಯ ಭೀತರಾಗಿದ್ದಾರೆ. ಎಲ್ಲರೂ ಮನೆಯ ಒಳಗಡೆ ಇದ್ದುದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹಾನಿ ಸಂಭವಿಸಿದ ಸ್ಥಳಕ್ಕೆ ಗ್ರಾಮ ಪಂಚಾಯಿತಿ ಸದಸ್ಯ ಕುಡಿಯರ ಭರತ್ ಭೇಟಿ ನೀಡಿ ಈ ಬಗ್ಗೆ ಪಿಡಿಒ ಗಮನಕ್ಕೆ ತಂದು ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ.