ಬೆಂಗಳೂರು, ಏ. ೧೬: ಕೊರೊನಾ ರಾಜ್ಯದಲ್ಲಿ ಉಲ್ಭಣವಾಗುತ್ತಿರುವ ಹಿನ್ನೆಲೆ ರಾಜ್ಯಾದ್ಯಂತ ಸಾರ್ವಜನಿಕ ಸಮಾರಂಭ, ಆಚರಣೆಗಳು, ಮನರಂಜನೆ ಕಾರ್ಯಕ್ರಮಗಳಿಗೆ ಜನರ ಒಗ್ಗೂಡುವಿಕೆಗೆ ನಿಯಂತ್ರಣ ಕ್ರಮವನ್ನು ರಾಜ್ಯ ಸರಕಾರ ಜಾರಿಗೊಳಿಸಿ ಆದೇಶಿಸಿದೆ.

ಧಾರ್ಮಿಕ ಆಚರಣೆ, ಸಮಾರಂಭವನ್ನು ನಿಷೇಧಿಸಿದ್ದು, ರಾಜಕೀಯ ಆಚರಣೆ, ಸಮಾರಂಭಗಳಿಗೆ ೨೦೦ ಜನ ಮೀರದಂತೆ ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ವಿ. ರವಿಕುಮಾರ್ ನಿರ್ದೇಶನ ನೀಡಿದ್ದಾರೆ. ಇದರೊಂದಿಗೆ ಸಾಮಾಜಿಕ ಆಚರಣೆ, ಸಮಾರಂಭಗಳಿಗೆ ಮಾರ್ಗಸೂಚಿಯಂತೆ ವ್ಯಕ್ತಿಯಿಂದ ೩.೨೫ ಚದರ ಮೀಟರ್ ದೈಹಿಕ ಅಂತರ ಪಾಲಿಸುವುದು ಕಡ್ಡಾಯವಾಗಿರುತ್ತದೆ. ತೆರೆದ ಪ್ರದೇಶಗಳಲ್ಲಿ ಮದುವೆ ಸಮಾರಂಭ ನಡೆದರೆ ೨೦೦, ಕಲ್ಯಾಣ ಮಂಟಪ, ಸಭಾಂಗಣ, ಹಾಲ್‌ಗಳಲ್ಲಿ ಮಾಡುವುದಾದರೆ ೧೦೦ ಜನ ಮೀರಬಾರದು.

ಜನ್ಮ ದಿನ ಹಾಗೂ ಇತರ ಆಚರಣೆಗಳು ಮಾಡಬೇಕಾದರೆ ತೆರೆದ ಪ್ರದೇಶದಲ್ಲಿ ೫೦, ಸಭಾಂಗಣಗಳಲ್ಲಿ ೨೫ ಜನ ಮೀರಬಾರದು.

ನಿಧನ ಸಂದರ್ಭ ೫೦ ಜನ, ಅಂತ್ಯಕ್ರಿಯೆಯಲ್ಲಿ ೨೫ ಮಂದಿ ಮೀರಬಾರದು. ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಆದೇಶ ಪಾಲಿಸದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆದೇಶದಲ್ಲಿ ಎಚ್ಚರಿಸಲಾಗಿದೆ.