ನಾಪೋಕ್ಲು, ಏ. ೧೬ : ಕಾಡಾನೆ ದಾಳಿಯಿಂದ ವ್ಯಕ್ತಿಯೊರ್ವ ಪಾರಾದ ಘಟನೆ ಬಲ್ಲಮಾವಟಿ ಗ್ರಾಮ ಪಂಚಾಯಿತಿ ಪೇರೂರು ಗ್ರಾಮದಲ್ಲಿ ನಡೆದಿದೆ. ಪೇರೂರು ಗ್ರಾಮದ ತಾಪಂಡ ಭೀಮಯ್ಯನವರು ವೀರಾಜಪೇಟೆ ಯಲ್ಲಿ ವಾಸವಾಗಿದ್ದು ಇಂದು ಪೇರೂರಿನಲ್ಲಿರುವ ತಮ್ಮ ತೋಟಕ್ಕೆ ಬೆಳಿಗ್ಗೆ ೮.೩೦ ರ ಸಮಯದಲ್ಲಿ ಹೋಗುತ್ತಿರುವ ಸಂದರ್ಭ ದಾರಿಯಲ್ಲಿ ಕಾಡಾನೆ ಯೊಂದು ಅಟ್ಟಿಸಿಕೊಂಡು ಬಂದಿದೆ.

ಭೀಮಯ್ಯ ಅವರು ಪ್ರಾಣ ಭಯದಿಂದ ಓಡಿ ಪ್ರಾಣಾಪಾಯ ದಿಂದ ಪಾರಾಗಿದ್ದಾರೆ. ಅಟ್ಟಿಸಿಕೊಂಡು ಬಂದ ಆನೆ ಪುನಃ ತೋಟದೊಳಗೆ ಹೋಗಿರುವು ದರಿಂದ ಆನೆ ದಾಳಿಯಿಂದ ಪಾರಾಗಿದ್ದಾರೆ. ಈ ವಿಭಾಗದಲ್ಲಿ ನಿರಂತರ ಕಾಡಾನೆಗಳು ದಾಳಿ ನಡೆಸಿ ಕಾಫಿ, ಬಾಳೆ, ಅಡಿಕೆ ಗಿಡಗಳನ್ನು ನಾಶ ಪಡಿಸಿ ಈ ವಿಭಾಗದ ಜನರಿಗೆ ಲಕ್ಷಾಂತರ ನಷ್ಟ ಉಂಟು ಮಾಡಿದ್ದು, ಅರಣ್ಯ ಇಲಾಖೆಯವರು ಕೂಡಲೇ ಆನೆಗಳನ್ನು ಕಾಡಿಗೆ ಓಡಿಸಬೇಕು. ಅಲ್ಲದೆ ಕಾಡಾನೆ ದಾಳಿಯಿಂದ ಗಾಯಗೊಂಡ ತಾಪಂಡ ಭೀಮಯ್ಯನವರಿಗೆ ಪರಿಹಾರವನ್ನು ಒದಗಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.