ಶನಿವಾರಸಂತೆ, ಏ. ೧೬: ಆತ ಊರಿಗೆ ಹೊಸಬ, ಕೆಲಸ ಕೇಳಿಕೊಂಡು ಓಡಾಡುತ್ತಿದ್ದ, ಗ್ರಾಮಸ್ಥರೊಬ್ಬರು ಸಹಾಯವಾಗಲಿ ಎಂದು ಆತನಿಗೆ ಕೆಲಸ ನೀಡಿ, ಜೊತೆಯಾಗಿರಿಸಿಕೊಂಡಿದ್ದರು. ಆದರೆ, ಕೆಲಸಕ್ಕೆ ಸೇರಿದ ದಿನವೇ ಅಪರಿಚಿತ ಕೆಲಸ ನೀಡಿದವರ ಬೈಕ್, ಹಣ, ಬಟ್ಟೆ ಸೇರಿದಂತೆ ಅದಾಗ ತಾನೆ ಕೆರೆಯಿಂದ ಹಿಡಿದು ತಂದಿದ್ದ ಕೆಜಿಗಟ್ಟಲ್ಲೆ ತಾಜಾ ಮೀನನ್ನು ಕದ್ದು ಕಾಲ್ಕಿತ್ತ ಘಟನೆ ಆಲೂರು ಸಿದ್ದಾಪುರ ಗ್ರಾಮ ಪಂಚಾಯ್ತಿ ದೊಡ್ಡಳ್ಳಿ ಗ್ರಾಮದಲ್ಲಿ ನಡೆದಿದೆ.

ತಾ. ೧೪ ರಂದು ದೊಡ್ಡಳ್ಳಿ ಗ್ರಾಮದ ಆಚಾರಿ ಕೆಲಸ ಮಾಡುವ ಚಂಗಪ್ಪ ಎಂಬವರ ಮನೆಗೆ ಕೆಲಸ ಕೇಳಿಕೊಂಡು ಓರ್ವ ಅಪರಿಚಿತ ಬಂದಿದ್ದ. ನನಗೆ ಕೆಲಸ ಇಲ್ಲ, ಆಚಾರಿ ಕೆಲಸ ಬರುತ್ತೆ. ನಿಮ್ಮ ಜೊತೆ ಕೆಲಸಕ್ಕೆ ಇರಿಸಿಕೊಳ್ಳಿ ಎಂದು ಹೇಳಿ ನಂಬಿಕಸ್ಥನ ರೀತಿ ನಾಟಕವಾಡಿದ್ದ. ಚಂಗಪ್ಪ ಅವರು ಕೂಡ ನನಗೆ ಸಹಾಯವಾಗುತ್ತೆ ಎಂದು ತಿಳಿದು ನನ್ನ ಜೊತೆ ಇರು ಎಂದು ಹೇಳಿ ಇರಿಸಿಕೊಂಡು ಊಟ ನೀಡಿ ಬಳಿಕ ಮೀನು ಹಿಡಿಯಲೆಂದು ಕರೆದೊಯ್ದಿದ್ದಾರೆ.

ದೊಡ್ಡಳ್ಳಿ ಗ್ರಾಮದ ಸರಕಾರಿ ಕೆರೆಯಲ್ಲಿ ಬೇಸಿಗೆ ಸಮಯದಲ್ಲಿ ಗ್ರಾಮಸ್ಥರಿಗೆ ಮೀನು ಹಿಡಿಯಲು ಅನುಮತಿ ನೀಡುತ್ತಾರೆ. ಕೆಲಸ ಕೇಳಿಕೊಂಡು ಬಂದ ಅಪರಿಚಿತನನ್ನು ತನ್ನ ಬೈಕ್‌ನಲ್ಲಿ ಕೆರೆ ಬಳಿಗೆ ಕರೆದುಕೊಂಡು ಹೋಗಿದ್ದಾರೆ. ಚಂಗಪ್ಪ ಮೀನು ಹಿಡಿಯಲು ತೆರಳುವ ಸಂದರ್ಭ ಆತನ ಕೈಗೆ ಬೈಕ್‌ನ ಕೀ, ನಗದು ಇದ್ದ ಪರ್ಸ್, ಧರಿಸಿದ್ದ ಬಟ್ಟೆಯನ್ನು ನೀಡಿದ್ದಾನೆ. ಒಂದು ಸುತ್ತು ಮೀನನ್ನು ಹಿಡಿದು ತಂದು ಅದನ್ನು ಆತನ ಕೈಗೆ ಚಂಗಪ್ಪ ನೀಡಿ. ಇನ್ನೊಂದು ಸುತ್ತು ಮೀನು ಹಿಡಿಯಲು ತೆರಳಿ ಎರಡ್ಮೂರು ಗಂಟೆ ಬಳಿಕ ಬಂದು ನೋಡಿದಾಗ ಅಪರಿಚಿತ ವ್ಯಕ್ತಿ ಚಂಗಪ್ಪ ಅವರ ಬೈಕ್, ಬಟ್ಟೆ, ಪರ್ಸ್ನಲ್ಲಿದ್ದ ರೂ ೫೦೦ ನಗದು ಹಾಗೂ ಹಿಡಿದು ತಂದಿದ್ದ ಮೀನು ಸಹಿತ ಕದ್ದು ಪರಾರಿಯಾಗಿದ್ದಾನೆ.

ಗಲಿಬಿಲಿಗೊಂಡ ಚಂಗಪ್ಪ ಅವರು ಆತನ ಪತ್ತೆಗೆ ಹುಡುಕಾಡಿದ್ದಾರೆ. ಎಲ್ಲೂ ಕಂಡು ಬಾರದ ಹಿನ್ನೆಲೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ ಕೆಲಸ ಕೇಳಿಕೊಂಡು ಬಂದವನ ಹೆಸರು, ವಿಳಾಸ ಕೂಡ ಪಡೆಯದೆ ಪೂರ್ವಪರ ವಿಚಾರಿಸದೆ ಕೆಲಸ ಕೊಟ್ಟ ತಪ್ಪಿಗೆ ಚಂಗಪ್ಪ ಇದೀಗ ಬೈಕ್, ಹಣ ಕಳೆದುಕೊಂಡು ಪರಿತಪಿಸುತ್ತಿದ್ದಾರೆ.