ಸೋಮವಾರಪೇಟೆ, ಏ. ೧೬: ಕರ್ನಾಟಕ ಜಾನಪದ ಪರಿಷತ್‌ನ ಸೋಮವಾರಪೇಟೆ ತಾಲೂಕು ಘಟಕದ ವತಿಯಿಂದ ಸಮೀಪದ ತಲ್ತರೆಶೆಟ್ಟಳ್ಳಿಯ ಬಗ್ಗನಮನೆಯಲ್ಲಿ ಯುಗಾದಿ ಹಬ್ಬಾಚರಣೆ ಅಂಗವಾಗಿ ‘ಜೀವನ ಚೇತನ-ಗ್ರಾಮದ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ’ ನಡೆಯಿತು. ಬಗ್ಗನಮನೆಯ ಸಂಧ್ಯಾಕೃಷ್ಣಪ್ಪ ಅವರ ಮನೆಯಂಗಳದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗ್ರಾಮದ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಏರ್ಪಡಿಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಜೀವನ ಚೇತನ ಕಾರ್ಯಕ್ರಮದ ಅಂಗವಾಗಿ, ಕಳೆದ ೩೫ ವರ್ಷಗಳ ಹಿಂದೆ ಕಣ್ಣಿನ ದೃಷ್ಟಿಯನ್ನು ಕಳೆದುಕೊಂಡರೂ ಸಹ ಪರಾವಲಂಭಿಯಾಗದೇ ತಮ್ಮ ದಿನನಿತ್ಯದ ಕೆಲಸ ಕಾರ್ಯಗಳನ್ನು ತಾವೇ ನಿರ್ವಹಿಸಿಕೊಳ್ಳುತ್ತಿರುವ ಗ್ರಾಮದ ೮೩ರ ಪ್ರಾಯದ ಬಗ್ಗನಮನೆ ತಂಗಮ್ಮ ಕಾಳಪ್ಪ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಮಾತನಾಡಿದ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಿ.ಜಿ. ಅನಂತಶಯನ, ಎರಡೂ ಕಣ್ಣುಗಳ ದೃಷ್ಟಿಯನ್ನು ಕಳೆದುಕೊಂಡರೂ ಜೀವನದ ಚೈತನ್ಯವನ್ನು ಉಳಿಸಿಕೊಂಡು ತಮ್ಮ ಕೆಲಸ ಕಾರ್ಯ ಗಳನ್ನು ತಾವೇ ನಿರ್ವಹಿಸಿ ಕೊಳ್ಳುತ್ತಿರುವ ತಂಗಮ್ಮ ಅವರದು ಅಪರೂಪದ ವ್ಯಕ್ತಿತ್ವ. ಅಂಗವಿಕಲತೆ ಶಾಪವಲ್ಲ ಎಂಬುದನ್ನು ತಂಗಮ್ಮ ಅವರು ನಿರೂಪಿಸಿದ್ದಾರೆ ಎಂದರು. ನಂತರ ಬಗ್ಗನಮನೆ ಗ್ರಾಮದ ಮಹಿಳೆಯರಿಗೆ ಯುಗಾದಿ ಪ್ರಯುಕ್ತ ರಂಗೋಲಿ ಸ್ಪರ್ಧೆ ನಡೆಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಇದರೊಂದಿಗೆ ಏರ್‌ಗನ್ ಮೂಲಕ ಗುರಿ ಇಡುವ ಸ್ಪರ್ಧೆ, ಬಾಂಬ್ ಇನ್ ದ ಸಿಟಿ ಸ್ಪರ್ಧೆಗಳು ನಡೆದವು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಾನಪದ ಪರಿಷತ್‌ನ ತಾಲೂಕು ಅಧ್ಯಕ್ಷ ಕೆ.ಎ. ಪ್ರಕಾಶ್ ವಹಿಸಿದ್ದರು. ವೇದಿಕೆಯಲ್ಲಿ ಗೌರವಾಧ್ಯಕ್ಷ ಎಸ್.ಎ. ಮುರುಳೀಧರ್, ಸಾಂಸ್ಕೃತಿಕ ಘಟಕದ ಅಧ್ಯಕ್ಷ ಕೆ.ಪಿ. ಸುದರ್ಶನ್, ಜಿಲ್ಲಾ ಉಪಾಧ್ಯಕ್ಷ ಅಂಬೆಕಲ್ ಕುಶಾಲಪ್ಪ, ಬಗ್ಗನಮನೆ ಗ್ರೂಪ್ ಅಧ್ಯಕ್ಷೆ ಆಶಾ ಮಾಚಯ್ಯ ಅವರುಗಳು ಉಪಸ್ಥಿತರಿದ್ದರು.

ಪರಿಷತ್‌ನ ಕಾರ್ಯದರ್ಶಿ ಎಂ.ಎ. ರುಬೀನಾ, ಸಾಹಿತ್ಯ ಘಟಕದ ಅಧ್ಯಕ್ಷ ನ.ಲ. ವಿಜಯ, ಉಪಾಧ್ಯಕ್ಷೆ ಸಂಧ್ಯಾಕೃಷ್ಣಪ್ಪ, ಬಗ್ಗನಮನೆಯ ಲವಿತ, ಕಾವ್ಯ ಆಶೀರ್ವಾದ್ ಅವರುಗಳು ಕಾರ್ಯಕ್ರಮ ನಿರ್ವಹಿಸಿದರು.