ಮಡಿಕೇರಿ, ಏ.೧೨: ಜಿಲ್ಲೆಯ ಹಾರಂಗಿ ಅಣೆಕಟ್ಟು ಹಿನ್ನೀರು ಹಾಗೂ ಕುಶಾಲನಗರ ವ್ಯಾಪ್ತಿಯ ಕಾವೇರಿ ನದಿ ಪಾತ್ರದಲ್ಲಿನ ಹೂಳು ಹೊರತೆಗೆಯುವ ಸಂಬAಧ ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅಧ್ಯಕ್ಷತೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರು ಕುಶಾಲನಗರ ಬಳಿಯ ಕಾವೇರಿ ನದಿ ಪಾತ್ರದಲ್ಲಿ ಮರಳು ತೆಗೆಯುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದು, ಈ ಹಿನ್ನೆಲೆ ಅಗತ್ಯ ಕ್ರಮವಹಿಸಬೇಕಿದೆ ಎಂದು ಹೇಳಿದರು.

ಮುಂದಿನ ಮಳೆಗಾಲದ ಅವಧಿಯಲ್ಲಿ ಹೆಚ್ಚು ಮಳೆಯಾದರೆ ಮತ್ತೆ ಪ್ರವಾಹ ಬರುವ ಸಾಧ್ಯತೆಯಿದ್ದು, ಆದ್ದರಿಂದ ಮರಳು ತೆಗೆಸುವಂತೆ ಸಾರ್ವಜನಿಕರು ಮನವಿ ಮಾಡುತ್ತಿದ್ದಾರೆ ಎಂದರು.

ಈ ಬಗ್ಗೆ ಮಾಹಿತಿ ನೀಡಿದ ಭೂ ವಿಜ್ಞಾನಿ ರೋಜಾ ಕಾವೇರಿ ನದಿ ಪಾತ್ರದಲ್ಲಿ ಮರಳು ಮಿಶ್ರಿತ ಮಣ್ಣು ಇದ್ದು, ಇದನ್ನು ಮರಳು ಬ್ಲಾಕ್‌ನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿ ಗಮನಕ್ಕೆ ತಂದರು.

ಈ ಕುರಿತು ಮಾತನಾಡಿದ ಹಿರಿಯ ಭೂ ವಿಜ್ಞಾನಿ ಶ್ರೀನಿವಾಸ್ ಮರಳು ಲಭ್ಯವಾದರೆ ನಿಯಮಿತವಾಗಿ ಜಿಲ್ಲಾ ಮರಳು ಸಮಿತಿ ಸಭೆಯ ಮುಂದೆ ತಂದು ಸರ್ಕಾರಿ ಸಂಸ್ಥೆಯ ಮೂಲಕ ಮರಳು ತೆಗೆಯಬಹುದಾಗಿದೆ. ಇಲ್ಲಿ ಮರಳು ಮಿಶ್ರಿತ ಮಣ್ಣು ಇರುವುದರಿಂದ ಮರಳು ಬ್ಲಾಕ್ ಎಂದು ಘೋಷಿಸಲು ಸಾಧ್ಯವಿಲ್ಲ ಎಂದರು.

ಈ ಕುರಿತು ಮಾತನಾಡಿದ ಜಿಲ್ಲಾಧಿಕಾರಿ ಚಾರುಲತ ಸೋಮಲ್ ಮರಳು ಮಿಶ್ರಿತ ಮಣ್ಣು ಇದೆ ಎಂದು ಭೂ ವಿಜ್ಞಾನಿಗಳು ಹೇಳುತ್ತಿರುವುದರಿಂದ ಈ ಬಗ್ಗೆ ನೀರಾವರಿ ಇಲಾಖೆಯ ಕಾರ್ಯದರ್ಶಿಯವರಿಗೆ ಪತ್ರ ಬರೆದು ಮರಳು ಮಿಶ್ರಿತ ಮಣ್ಣು ತೆಗೆಯಲು ಅವಕಾಶ ನೀಡಲು ಅನುಮತಿ ಪಡೆಯುವಂತೆ ನೀರಾವರಿ ಇಲಾಖೆಯ ಎಂಜಿನಿಯರ್‌ಗೆ ಸೂಚಿಸಿದರು.

ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಮದನ್ ಮೋಹನ್, ಮರಳು ಮಿಶ್ರಿತ ಮಣ್ಣನ್ನು ಟೆಂಡರ್ ಆಹ್ವಾನಿಸಲು ಬರುವುದಿಲ್ಲ ಎಂದರು.

ಜಿ.ಪಂ.ಸಿಇಒ ಭನ್ವರ್ ಸಿಂಗ್ ಮೀನಾ ಅವರು ಹಾರಂಗಿ ಜಲಾಶಯ ಬಳಿಯ ಕಾವೇರಿ ನದಿ ಪಾತ್ರದಲ್ಲಿ ಮರಳು ಇರುವುದಿಲ್ಲ ಎಂದು ಹೇಳುತ್ತಿರುವುದರಿಂದ ಮಣ್ಣು ತೆಗೆಯಲು ಎನ್‌ಒಸಿ ನೀಡುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿಗೆ ಸಲಹೆ ಮಾಡಿದರು.

ಕಾವೇರಿ ನೀರಾವರಿ ನಿಗಮದ ಹಾರಂಗಿ ಜಲಾಶಯದ ಕಾರ್ಯಪಾಲಕ ಎಂಜಿನಿಯರ್ ಮಂಜು ಅವರು ಹಾರಂಗಿ ಜಲಾಶಯ ವ್ಯಾಪ್ತಿಯಲ್ಲಿ ಹೂಳು ತೆಗೆಯುವ ಸಂಬAಧ ಹಲವು ಮಾಹಿತಿ ನೀಡಿ ಹಾರಂಗಿ ಹಿನ್ನೀರಿನ ನದಿ ಪಾತ್ರದಲ್ಲಿ ಭೂಕುಸಿತ ಸಂಭವಿಸುವ ಪ್ರದೇಶದಲ್ಲಿ ಗೇಬಿಯಾನ್ (ಉಚಿbioಟಿ ತಿಚಿಟಟ) ತಡೆಗೋಡೆ ನಿರ್ಮಾಣ ಕಾರ್ಯ ಸದ್ಯದಲ್ಲೇ ಆರಂಭವಾಗಲಿದೆ. ಹಾಗೆಯೇ ವಿವಿಧ ಕಡೆಗಳಲ್ಲಿ ಚೆಕ್ ಡ್ಯಾಂ ನಿರ್ಮಾಣ ಮಾಡುವ ಕಾರ್ಯ ಆರಂಭಗೊಳ್ಳಲಿದೆ. ಮಾದಾಪುರ, ಮುಕ್ಕೋಡ್ಲು ಮತ್ತಿತರ ಕಡೆಗಳಲ್ಲಿ ತಡೆಗೋಡೆ ನಿರ್ಮಾಣ ಮಾಡಲಾಗುತ್ತದೆ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ, ಉಪ ವಿಭಾಗಾಧಿಕಾರಿ ಈಶ್ವರ ಕುಮಾರ್ ಖಂಡು, ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಶಬಾನಾ ಎಂ.ಶೇಖ್, ಲೋಕೋಪಯೋಗಿ ಇಲಾಖೆ ಎಇಇ ಶಿವರಾಮ್, ನೀರಾವರಿ ಇಲಾಖೆಯ ಸಹಾಯಕ ಎಂಜಿನಿಯರ್ ನಾಗರಾಜು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ನೆಹರು, ದಯಾನಂದ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ರಾಜು, ಕುಶಾಲನಗರ ಪ.ಪಂ.ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್ ಇತರರು ಇದ್ದರು.