ಮುಳ್ಳೂರು, ಏ. ೧೨: ಶನಿವಾರಸಂತೆ ರೋಟರಿ ಸಂಸ್ಥೆ ವತಿಯಿಂದ ಶನಿವಾರಸಂತೆ ವ್ಯಾಪ್ತಿಯ ಕೊರೊನಾ ವಾರಿಯರ್ಸ್ಗಳಾದ ಸಮುದಾಯ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಸಹಾಯಕಿ ಸರಸ್ವತಿ, ಶನಿವಾರಸಂತೆ ಭಾಗದ ಆಶಾ ಕಾರ್ಯಕರ್ತೆ ಉಷಾ ಜಯೇಶ್ ಮತ್ತು ಹಂಡ್ಲಿ ವ್ಯಾಪ್ತಿಯ ಆಶಾ ಕಾರ್ಯಕರ್ತೆ ಸೌಭಾಗ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಮೀಪದ ಗುಡುಗಳಲೆ ಆರ್.ವಿ. ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ರೋಟರಿ ಕ್ಲಬ್ ಕೊಡಗು ಜಿಲ್ಲಾ ರಾಜ್ಯಪಾಲ ರಂಗನಾಥ್ ಭಟ್, ರೋಟರಿ ಸಂಸ್ಥೆಯು ಯಾವುದೇ ಅಪೇಕ್ಷೆ ಇಲ್ಲದೆ ಸಮಾಜದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ವಿಶ್ವದ ಏಕೈಕ ಸಾಮಾಜಿಕ ಸೇವಾ ಸಂಸ್ಥೆಯಾಗಿದೆ. ರೋಟರಿ ಸಂಘಟನೆ ಸಮಾಜ ಮತ್ತು ದೇಶವನ್ನು ಅಭಿವೃದ್ದಿ ಪಡಿಸುವ ಕಾರ್ಯದಲ್ಲಿ ಕೈಜೋಡಿಸುತ್ತಿರುವುದು ಹೆಮ್ಮೆಯಾಗಿದೆ. ರೋಟರಿ ಸಂಸ್ಥೆ ಸಮಾಜ ಸೇವೆಯ ಜೊತೆಯಲ್ಲಿ ಆರೋಗ್ಯ, ಸ್ವಚ್ಛತೆ, ಪರಿಸರ ಮುಂತಾದವುಗಳ ಬಗ್ಗೆ ಅರಿವು ಮೂಡಿಸುತ್ತಿದೆ. ಕೋವಿಡ್-೧೯ ಸಂದರ್ಭ ರೋಟರಿ ಸದಸ್ಯರು ಜನರನ್ನು ಜಾಗೃತಿಗೊಳಿಸುವ ಕಾರ್ಯವನ್ನು ಮಾಡಿದೆ. ಕೊರೊನಾ ವಿರುದ್ದ ಹೋರಾಡಿದ ಆರೋಗ್ಯ ಮತ್ತು ಆಶಾ ಕಾರ್ಯಕರ್ತರ ಪಾತ್ರ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಹಾಯಕ ಗರ‍್ನರ್ ಪಿ.ಕೆ.ರವಿ ಮಾತನಾಡಿ, ಕೋವಿಡ್-೧೯ ಪರಿಸ್ಥಿತಿಯಲ್ಲಿ ರೋಟರಿ ಸಂಸ್ಥೆ ಸಮಾಜಮುಖಿ ಕೆಲಸ ಮಾಡಿರುವ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.

ರೋಟರಿ ವಲಯ ಸೇನಾನಿ ಜೇಕಬ್ ಮಾತನಾಡಿದರು. ಶನಿವಾರಸಂತೆ ರೋಟರಿ ಕ್ಲಬ್ ಅಧ್ಯಕ್ಷ ಎಚ್.ವಿ.ದಿವಾಕರ್, ಕಾರ್ಯದರ್ಶಿ ಎ.ಡಿ.ಮೋಹನ್‌ಕುಮಾರ್, ಮಹಿಳಾ ರೋಟರಿಯನ್ ರಜನಿ ರಂಗನಾಥ್ ಭಟ್, ರೋಟರಿ ಕ್ಲಬ್ ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಹಾಜರಿದ್ದರು.