ಮಡಿಕೇರಿ, ಏ. ೧೨: ವೀರಾಜಪೇಟೆ ತಾಲೂಕಿನ ಕೊಟ್ಟೋಳಿ ಪೈಸಾರಿ ಕಾಲೋನಿಯಲ್ಲಿ ಸುಮಾರು ೩೬ ಕುಟುಂಬಗಳು ಅನೇಕ ವರ್ಷಗಳಿಂದ ವಾಸವಿದ್ದರೂ ಕೂಡ ಪುಟ್ಟ ಮಕ್ಕಳಿಗೆ ಅಂಗನವಾಡಿ ಕೇಂದ್ರ ಇಲ್ಲದಂತಾಗಿದೆ ಅಧಿಕಾರಿಗಳು ಬಡ ಕಾರ್ಮಿಕರನ್ನು ಕಡೆಗಣಿಸುತ್ತಿದ್ದಾರೆ ಎಂದು ದಲಿತ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಆರ್. ಶಿವಣ್ಣ ಹೇಳಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ವೀರಾಜಪೇಟೆ ತಾಲೂಕಿನ ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಟ್ಟೋಳಿ ಗ್ರಾಮದ ಪೈಸಾರಿ ಕಾಲೋನಿಯಲ್ಲಿ ದಲಿತ ಸಂಘರ್ಷ ನೂತನ ಸಮಿತಿ ರಚನೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಕೊಟ್ಟೋಳಿ ಕಾಲೋನಿಯಲ್ಲಿ ಸುಮಾರು ೩೬ ಬಡ ಕಾರ್ಮಿಕ ಕುಟುಂಬಗಳು ವಾಸವಿದ್ದು ಇಲ್ಲಿ ಅನೇಕ ಪುಟ್ಟ ಮಕ್ಕಳಿರುವ ಕಾಲೋನಿ ಯಲ್ಲಿ ಸರಕಾರ ಅಂಗನವಾಡಿ ಕೇಂದ್ರ ನೀಡದಿರು ವುದು ಬೇಸರ ತಂದಿದೆ. ಇಲ್ಲಿನ ನಿವಾಸಿಗಳು ಕೂಲಿ ಕಾರ್ಮಿಕ ರಾಗಿದ್ದು ಕಾಲೋನಿಯಿಂದ ಸುಮಾರು ಮೂರು ಕಿ.ಮೀ. ದೂರದಲ್ಲಿ ಅಂಗನವಾಡಿ ಇದ್ದರೆ ಯಾವ ಮಕ್ಕಳು ಹೋಗಲು ಸಾಧ್ಯ ಎಂದು ಪ್ರಶ್ನಿಸಿದರು.

ಹುದಿಕೇರಿಯ ಬೆಳ್ಳೂರಿನಲ್ಲಿ ದಲಿತ ನಾಯಕನ ಮೇಲೆ ಹಲ್ಲೆ ನಡೆದಿರುವುದು ಖಂಡನಿಯ, ಹಲ್ಲೆ ನಡೆಸಿದವರನ್ನು ಕೂಡಲೇ ಪೊಲೀಸರು ಬಂಧಿಸಬೇಕು. ಇಲ್ಲ ವಾದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ತಿಳಿಸಿದರು.

ದಲಿತ ಸಂಘರ್ಷ ನೂತನ ಸಮಿತಿ ರಚನೆ ಸಭೆಯ ಅಧ್ಯಕ್ಷತೆಯನ್ನು ಅಲ್ಲಿನ ನಿವಾಸಿ ಹಿರಿಯರಾದ ಬೋಜ ವಹಿಸಿದ್ದರು. ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಹೆಚ್.ಜಿ. ಗೋಪಾಲ ಪ್ರಾಸ್ತಾವಿಕವಾಗಿ ಮಾತನಾಡಿ ದರು.

ಸ್ಥಳೀಯ ನಿವಾಸಿ ಗಳಾದ ಅನಂತ್ ಕುಮಾರ್, ಮಹಿಳಾ ಒಕ್ಕೂಟದ ಗೀತಾ, ಅನಿತಾ, ಪುಷ್ಪ ಅವರುಗಳು ಕಾಲೋನಿಯ ಸಮಸ್ಯೆಗಳ ಬಗ್ಗೆ ತಿಳಿಸಿದರು. ವೇದಿಕೆ ಯಲ್ಲಿ ಸಮಿತಿಯ ತಾಲೂಕು ಸಂಚಾಲಕ ಹೆಚ್.ಪಿ.ಲವ, ಗ್ರಾಮ ಸಂಚಾಲಕ ಹೆಚ್.ಕೆ. ವಿದ್ಯಾಧರ, ಆಂತರಿಕ ಶಿಸ್ತು ಸಮಿತಿಯ ಹೆಚ್.ಕೆ. ಮೋಹನ್, ಖಜಾಂಚಿ ಹೆಚ್.ಎಂ. ರಮೇಶ್ ಉಪಸ್ಥಿತರಿದ್ದು ಮಾತನಾಡಿದರು. ಲವ ಸ್ವಾಗತಿಸಿ, ವಿದ್ಯಾಧರ ವಂದಿಸಿದರು. ಸಭೆಯ ನಂತರ ನೂತನ ಗ್ರಾಮ ಸಮಿತಿಯನ್ನು ರಚಿಸಲಾಯಿತು.