ನಾಪೋಕ್ಲು, ಏ. ೧೨: ಸೌರಮಾನ ಯುಗಾದಿಯ ದಿನದಂದು ಶಿವಲಿಂಗಕ್ಕೆ ಸೂರ್ಯನ ಕಿರಣ ಬೀಳುವ ವಿಶೇಷ ದೇಗುಲವೊಂದು ಕೊಡಗಿನಲ್ಲಿದೆ. ಸಾವಿರ ವರ್ಷಗಳ ಇತಿಹಾಸ ಹೊಂದಿ ಶ್ರದ್ಧಾ ಕೇಂದ್ರವಾಗಿ ಭಕ್ತರನ್ನು ಪುಳಕಿತ ಗೊಳಿಸುವ ಈ ಸನ್ನಿದ್ಧಿಯಲ್ಲಿ ಜೀಣೋದ್ಧಾರ ಕಾರ್ಯ ಬಿರುಸಿನಿಂದ ನಡೆಯುತ್ತಿದೆ.

ನಾಪೋಕ್ಲು ಸಮೀಪದ ಮೂಟೇರಿಯ ಉಮಾಮಹೇಶ್ವರಿ ದೇವಾಲಯದಲ್ಲಿ ಪ್ರತಿವರ್ಷ ಏ. ೧೪ ರಂದು ವಾರ್ಷಿಕೋತ್ಸವ ಆಚರಣೆ ಯಾಗುತ್ತದೆ. ದೀರ್ಘ ಇತಿಹಾಸ ಹೊಂದಿರುವ ಈ ಸನ್ನಿದ್ಧಿ ಭಕ್ತಾಧಿ ಗಳನ್ನು ಕೈಬೀಸಿ ಕರೆಯುತ್ತಿದೆ. ಇದೀಗ ದೇವಾಲಯದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದು, ಅಂದಾಜು ೧.೫೦ ಕೋಟಿ ರೂ. ವೆಚ್ಚದಲ್ಲಿ ಕೆಲಸವಾಗುತ್ತಿದೆ. ತಕ್ಕರಾದ ವಾಂಜAಡ ಬೋಪಯ್ಯ ನೇತೃತ್ವದಲ್ಲಿ ತಕ್ಕಮುಖ್ಯಸ್ಥರು, ಜೀರ್ಣೋದ್ಧಾರ ಸಮಿತಿ, ದೇವಾಲದ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರು ಮುಂದಾಳತ್ವದಲ್ಲಿ ದೇವಾಲಯದ ಗರ್ಭಗುಡಿ ಹಾಗೂ ತೀರ್ಥಮಂಟಪ ಕೆಲಸಗಳು ಮುಕ್ತಾಯಗೊಂಡಿದ್ದು, ಪೌಳಿ ನಿರ್ಮಾಣ ಕಾರ್ಯ ಆರಂಭಗೊAಡಿದೆ. ದೇವಾಲಯಕ್ಕೆ ಅಗತ್ಯವಿರುವ ಶಿಲೆಗಳು ಕಾರ್ಕಳ ದಿಂದ ತಂದಿದ್ದು ಕೆತ್ತನೆ ಕಾರ್ಯವು ಇದೀಗ ಭರದಿಂದ ನಡೆಯುತ್ತಿದೆ.

ದೇವರ ಅಷ್ಟಬಂಧ ಬ್ರಹ್ಮಕಲಶ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ನೀಲೇಶ್ವರ ಶ್ರೀ ಪದ್ಮನಾಭ ಉಚ್ಚಿಲತ್ತಾಯ ತಂತ್ರಿಗಳ ನೇತೃತ್ವದಲ್ಲಿ ನಡೆಯುತ್ತಿದ್ದು, ದೇವರನ್ನು ಬಾಲಾಲಯದಲ್ಲಿ ಪ್ರತಿಷ್ಟಾಪಿಸಲಾಗಿದೆ ಎಂದು ತಕ್ಕ ಮುಖ್ಯಸ್ಥರು ತಿಳಿಸಿದ್ದಾರೆ. ಹಾಗೆಯೇ ನಿತ್ಯಪೂಜೆ ನಡೆಯುತ್ತಿದೆ. ಉಮಾಮಹೇಶ್ವರಿ ದೇವಾಲಯದಲ್ಲಿ ಈಶ್ವರ ದೇವರು ಲಿಂಗದ ರೂಪದಲ್ಲಿ ಪ್ರತಿಷ್ಟಾಪಿತನಾಗಿದ್ದು ಪಾರ್ವತಿ ದೇವಿ ಉತ್ಸವ ಮೂರ್ತಿಯಾಗಿದೆ.

ಉಮಾಮಹೇಶ್ವರಿ ದೇವಾಲಯಕ್ಕೆ ಸುಮಾರು ಸಾವಿರ ವರ್ಷಗಳ ಇತಿಹಾಸವಿದೆ. ತಮಿಳುನಾಡು ಅರಸ ರಾಜರಾಜೇಂದ್ರ ಚೋಳ ರಾಜ್ಯವಿಸ್ತರಣೆ ಸಂದರ್ಭ ಕಾವೇರಿ ನದಿದಂಡೆ ಉದ್ದಕ್ಕೂ ಸ್ಥಾಪಿಸಿದ ದೇವಾಲಯಗಳ ಪೈಕಿ ಇದೂ ಒಂದೆAದು ಹೇಳಲಾಗಿದೆ. ೧೭ನೇ ಶತಮಾನದಲ್ಲಿ ಊರಿನವರ ವೈಮನಸ್ಯದಿಂದ ದೇವಾಲಯ ಶಿಥಿಲಗೊಂಡಿತ್ತು. ನಂತರ ಗ್ರಾಮದ ಜನರು ಒಟ್ಟಾಗಿ ದೇವಾಲಯದ ಅಭಿವೃದ್ದಿಗೆ ಶ್ರಮಿಸಿದರು. ೧೯೫೬-೫೭ರಲ್ಲಿ ಕೊಳಕೇರಿಯ ಬಿದ್ದಾಟಂಡ ತಿಮ್ಮಯ್ಯ ಅವರ ನೇತೃತ್ವದಲ್ಲಿ ಊರಿನವರ ಸಹಕಾರದೊಂದಿಗೆ ಈ ದೇವಾಲಯವನ್ನು ಅಭಿವೃದ್ದಿ ಪಡಿಸಲಾಯಿತು.

ಇದು ಬಹಳ ಹಳೆಯ ದೇವಸ್ಥಾನ. ಈಗ ಪೂರ್ತಿಯಾಗಿ ಕೆಡವಿ ಜೀರ್ಣೋದ್ಧಾರ ಕೈಗೊಳ್ಳ ಲಾಗುತ್ತಿದೆ. ಸುಮಾರು ೧.೫೦ ಕೋಟಿ ವೆಚ್ಚದಲ್ಲಿ ದೇವಾಲಯದ ಜೀರ್ಣೋದ್ಧಾರ ನಡೆಯುತ್ತಿದೆ. ಅರ್ಧದಷ್ಟು ಹಣ ಸಂಗ್ರಹವಾಗಿದೆ. ಉಳಿದುದನ್ನು ದಾನಿಗಳಿಂದ ಸಂಗ್ರಹಿಸಿ ಜೀರ್ಣೋದ್ಧಾರ ಪೂರ್ಣಗೊಳಿಸಲಾಗುವುದು ಎಂದು ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಅಪ್ಪಚ್ಚೀರ ರಮ್ಮಿನಾಣಯ್ಯ ತಿಳಿಸಿದ್ದಾರೆ.

-ದುಗ್ಗಳ ಸದಾನಂದ.