ಸೋಮವಾರಪೇಟೆ, ಏ. ೧೦: ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಹಾಗೂ ಅಬ್ಬೂರುಕಟ್ಟೆ ಸಂತ ಲಾರೆನ್ಸ್ ದೇವಾಲಯ ಇವುಗಳ ಆಶ್ರಯದಲ್ಲಿ ೧೦ನೇ ವರ್ಷದ ಟೆನ್ನಿಸ್‌ಬಾಲ್ ಕ್ರಿಕೆಟ್ ಪಂದ್ಯಾಟ ಮತ್ತು ಇತರ ಗ್ರಾಮೀಣ ಕ್ರೀಡಾಕೂಟಕ್ಕೆ ನೇರುಗಳಲೆ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮೈದಾನದಲ್ಲಿ ಚಾಲನೆ ನೀಡಲಾಗಿದ್ದು, ತಾ. ೧೧ ರಂದು (ಇಂದು) ಸಮಾರೋಪ ಹಾಗೂ ಬಹುಮಾನ ವಿತರಣೆ ನಡೆಯಲಿದೆ.ಕ್ರೀಡಾಕೂಟವನ್ನು ಮಾದಾಪುರ ಚರ್ಚ್ನ ಧರ್ಮಗುರುಗಳಾದ ರಾಜೇಶ್ ಉದ್ಘಾಟಿಸಿದರು. ಸಭಾ ಕಾರ್ಯಕ್ರಮವನ್ನು ನಾಪೋಕ್ಲು ಧರ್ಮ ಕೇಂದ್ರದ ಗುರುಗಳಾದ ಜ್ಞಾನಪ್ರಕಾಶ್ ಉದ್ಘಾಟಿಸಿದರು. ನಂತರ ಜ್ಞಾನ ಪ್ರಕಾಶ್ ಮಾತನಾಡಿ, ಮನೋಬಲ ಮತ್ತು ದೈಹಿಕ ಸಾಮರ್ಥ್ಯ ವೃದ್ಧಿಸಲು ಕ್ರೀಡೆ ಸಹಕಾರಿಯಾಗಿದೆ ಎಂದರು.ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಜಿಲ್ಲಾ ಪಂಚಾಯಿತಿ ಸದಸ್ಯೆ ಪೂರ್ಣಿಮಾ ಗೋಪಾಲ್ ಮಾತನಾಡಿ, ಸಮುದಾಯ ಬಾಂಧವರು ಒಂದಾಗಿ ಕೆಲಸ ಮಾಡಿದಲ್ಲಿ ಮಾತ್ರ ಯಾವುದೇ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಎಸ್.ಎಂ. ಡಿಸಿಲ್ವಾ ವಹಿಸಿದ್ದರು. ಕ್ರೀಡಾಕೂಟದ ಧ್ವಜಾರೋಹಣವನ್ನು ಕೊಡಗು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಪೆರಿಗ್ರಿನ್ ಎಸ್. ಮಚ್ಚಾಡೋ ನೆರವೇರಿಸಿದರು.

(ಮೊದಲ ಪುಟದಿಂದ) ವೇದಿಕೆಯಲ್ಲಿ ನೇರುಗಳಲೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆ.ಜಿ. ಪುಷ್ಪಾ, ತೊರೆನೂರು ಗ್ರಾ.ಪಂ ಉಪಾಧ್ಯಕ್ಷ ಎಂ.ಟಿ. ಬೇಬಿ, ಜಿ.ಪಂ. ಮಾಜಿ ಅಧ್ಯಕ್ಷ ವಿ.ಎಂ. ವಿಜಯ, ಲೊಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರ ಸೈಜನ್ ಪೀಟರ್, ಮಡಿಕೇರಿಯ ದಿವ್ಯಜ್ಯೋತಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಿರಿಲ್ ಮೊರಾಸ್, ಕೃಷಿಕರಾದ ಕೆ.ವಿ. ರಾಯ್, ಸ್ಥಾಪಕ ಅಧ್ಯಕ್ಷ ವಿ.ಎ. ಲಾರೆನ್ಸ್, ಪ್ರೌಢಶಾಲಾ ಮುಖ್ಯ ಶಿಕ್ಷಕ ಕೃಷ್ಣೇಗೌಡ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ತಂಗಮ್ಮ ಮತ್ತಿತರರು ಉಪಸ್ಥಿತರಿದ್ದರು.

ಇದೇ ಸಂದರ್ಭ ಕಲಾವಿದ ಶಿನು ಜಾರ್ಜ್ ಹಾಗೂ ಕೊಡಗು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಪೆರಿಗ್ರಿನ್ ಎಸ್. ಮಚ್ಚಾಡೋ ಅವರುಗಳನ್ನು ಸನ್ಮಾನಿಸಲಾಯಿತು.

ಇಂದು ಸಮಾರೋಪ: ಕ್ರೀಡಾಕೂಟದ ಸಮಾರೋಪ ಹಾಗೂ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ತಾ. ೧೧ ರಂದು (ಇಂದು) ಸಂಜೆ ೪.೩೦ಕ್ಕೆ ನಡೆಯಲಿದೆ. ಹತ್ತನೇ ತರಗತಿ ಮತ್ತು ಪಿಯುಸಿಯಲ್ಲಿ ಅತೀಹೆಚ್ಚು ಅಂಕಗಳಿಸಿದ ಜನಾಂಗದ ವಿದ್ಯಾರ್ಥಿಗಳನ್ನು ಗೌರವಿಸಲಾಗುವುದು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ, ಮಾಜಿ ಸೈನಿಕರಾದ ಥೋಮಸ್ ವಾಸ್, ಪ್ರಗತಿಪರ ಕೃಷಿಕ ಜೆರೋಮ್ ಡಿಸೋಜ, ವೈದ್ಯಕೀಯ ಸೇವೆಯಲ್ಲಿ ಡಾ.ಶರ್ಮಿಳಾ ಫರ್ನಾಂಡಿಸ್, ಪತ್ರಿಕಾರಂಗದಲ್ಲಿ ಎಂ.ಬಿ. ವಿನ್ಸೆಂಟ್, ಸಮಾಜ ಸೇವೆಯಲ್ಲಿ ಮೈಕಲ್ ವೇಗಾಸ್, ರೈಮಂಡ್ ಜೋಸೆಫ್, ಫ್ರಾನ್ಸಿಸ್ ಡಿಸೋಜ ಅವರುಗಳನ್ನು ಸನ್ಮಾನಿಸ ಲಾಗುವುದು ಎಂದು ಸಮಿತಿಯ ಅಧ್ಯಕ್ಷ ಎಸ್.ಎಂ. ಡಿಸಿಲ್ವಾ ತಿಳಿಸಿದ್ದಾರೆ.