ಕಡಂಗ, ಏ. ೧೦: ಕೊರೊನಾ ಹರಡುವಿಕೆ ತಡೆಗೆ ಕೇರಳದಿಂದ ಕೊಡಗು ಜಿಲ್ಲೆಗೆ ಪ್ರವೇಶಿಸುವವರಿಗೆ ಕೋವಿಡ್ ವರದಿ ಕಡ್ಡಾಯಗೊಳಿಸಿದ್ದು, ಗಡಿಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಸಿಬ್ಬಂದಿಗಳು ತೀವ್ರ ತಪಾಸಣೆ ನಡೆಸುತ್ತಿದ್ದಾರೆ. ಕೇರಳದಿಂದ ಮಾಕುಟ್ಟ ಗಡಿ ಮೂಲಕ ಜಿಲ್ಲೆ ಪ್ರವೇಶಿಸುವವರ ವರದಿಯನ್ನು ಕ್ಯೂಆರ್ ಕೋಡ್ ಮೂಲಕ ಪರಿಶೀಲಿಸಿದ ನಂತರ ಒಳ ಕರೆದುಕೊಳ್ಳಲಾಗುತ್ತಿದೆ. ಹಲವರು ನಕಲಿ ಕೋವಿಡ್ ವರದಿ ನೀಡುತ್ತಿದ್ದ ಹಿನ್ನಲೆ ಅಧಿಕಾರಿಗಳು ಗಡಿ ಭಾಗದಲ್ಲಿ ತಪಾಸಣೆ ತೀವ್ರಗೊಳಿಸಿದ್ದಾರೆ.

ತಾ. ೯ ರಂದು ೫೦ಕ್ಕೂ ಹೆಚ್ಚು ವಾಹನಗಳಲ್ಲಿ ಬಂದ ಜನರಲ್ಲಿ ಕೋವಿಡ್ ವರದಿ ಇಲ್ಲದ ಕಾರಣ ಕೊಡಗಿಗೆ ಪ್ರವೇಶಿಸಲು ಅಧಿಕಾರಿಗಳು ನಿರಾಕರಿಸಿ ವಾಪಸ್ ಕಳುಹಿಸಿದರು. ಜಿಲ್ಲಾಡಳಿತದ ಮಾರ್ಗಸೂಚಿಯನ್ನು ಸಾರ್ವಜನಿಕರು ಕಡ್ಡಾಯವಾಗಿ ಪಾಲಿಸಬೇಕೆಂದು ಮಾಕುಟ್ಟ ಗಡಿ ಭಾಗದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಮನವಿ ಮಾಡಿ ಕೊಂಡಿದ್ದಾರೆ ಈ ಸಂದರ್ಭ ಆರೋಗ್ಯ ಇಲಾಖೆಯ ನಾಗೇಂದ್ರ, ಶಿವಯ್ಯ, ಪೊಲೀಸ್ ಇಲಾಖೆಯ ಸುಧೀರ್, ಕಂದಾಯ ಇಲಾಖೆಯ ಸೋಮಣ್ಣ ಮತ್ತು ಜನಾರ್ದನ ಹಾಜರಿದ್ದರು.