ಸೋಮವಾರಪೇಟೆ, ಏ.೯: ಹಾರಂಗಿ ಹಿನ್ನೀರಿನಲ್ಲಿ ಸ್ನೇಹಿತರೊಂದಿಗೆ ಆಟವಾಡಲೆಂದು ತೆರಳಿದ್ದ ಕಾಲೇಜು ವಿದ್ಯಾರ್ಥಿಯೋರ್ವ ಆಕಸ್ಮಿಕವಾಗಿ ಮುಳುಗಿ ದುರ್ಮರಣಕ್ಕೀಡಾಗಿದ್ದು, ಈತನ ನಿಧನದ ವಿಷಯ ಕೇಳಿದ ಅಜ್ಜಿ ಹೃದಯಾಘಾತಕ್ಕೊಳಗಾಗಿ ಇಹಲೋಕ ತ್ಯಜಿಸಿದ ಘಟನೆ ಸಮೀಪದ ಹೊಸತೋಟ ಗ್ರಾಮದಲ್ಲಿ ನಡೆದಿದೆ. ಹೊಸತೋಟ ಗ್ರಾಮದ ನಿವಾಸಿ ರಮ್ಲಾನ್ ಹಾಗೂ ಅಪ್ಸತ್ ದಂಪತಿ ಪುತ್ರ, ಕುಶಾಲನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಮುಬಾಷಿರ್ (೧೯) ಹಾರಂಗಿ ಹಿನ್ನೀರಿನ ಹೊಳೆಯಲ್ಲಿ ಮೃತಪಟ್ಟಿದ್ದು, ಈತನ ನಿಧನ ತಿಳಿದು ಅಜ್ಜಿ ರುಕಿಯಾ (೬೨) ಅವರು ಹೃದಯಾಘಾತಕ್ಕೊಳಗಾಗಿ ಇಹಲೋಕ ತ್ಯಜಿಸಿದ್ದಾರೆ.ನಿನ್ನೆ ದಿನ ಮುಬಾಷಿರ್, ಇತರ ೬ ಮಂದಿ ಸ್ಥಳೀಯ ಸ್ನೇಹಿತರೊಂದಿಗೆ ಗರಗಂದೂರು ಬಿ ಗ್ರಾಮದಲ್ಲಿ ಹರಿಯುವ ಹಾರಂಗಿ ಹಿನ್ನೀರಿನ ಹೊಳೆಗೆ ತೆರಳಿದ್ದು, ಸುಮಾರು ೧೧ ಗಂಟೆಯ ವೇಳೆಗೆ ನೀರಿನಲ್ಲಿ ಆಟವಾಡುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಮೂವರು ಮುಳುಗಿದ್ದಾರೆ.ಈ ಸಂದರ್ಭ ಇತರ ಮೂವರು ಸ್ನೇಹಿತರು ಈರ್ವರನ್ನು ರಕ್ಷಿಸಿದ್ದು, ಮುಬಾಷಿರ್‌ನನ್ನು ರಕ್ಷಣೆ ಮಾಡುವಲ್ಲಿ ವಿಫಲರಾಗಿದ್ದಾರೆ. ಕಣ್ಣೆದುರೇ ಸ್ನೇಹಿತ ನೀರಿನಲ್ಲಿ ನಾಪತ್ತೆಯಾಗಿದ್ದರಿಂದ ಬೆದರಿದ ಇತರರು, ಆತನ ಬಟ್ಟೆ, ಮೊಬೈಲ್‌ನ್ನು ಸಮೀಪದಲ್ಲಿರುವ ಬಸವೇಶ್ವರ ದೇವಾಲಯದ ಆವರಣದೊಳಗೆ ಎಸೆದು ಸ್ಥಳದಿಂದ ತೆರಳಿದ್ದರು.

ರಾತ್ರಿ ೮ ಗಂಟೆ ಸುಮಾರಿಗೆ ದೇವಾಲಯದೊಳಗೆ ಮೊಬೈಲ್ ರಿಂಗಣಿಸುತ್ತಿದ್ದುದನ್ನು ಗಮನಿಸಿದ ಅರ್ಚಕರು, ಸ್ಥಳೀಯ ನಿವಾಸಿ ರೋಹಿತ್ ಅವರಿಗೆ ಮಾಹಿತಿ ನೀಡಿದ್ದಾರೆ. ರೋಹಿತ್ ಅವರು ಡಿವೈಎಸ್‌ಪಿ ಶೈಲೇಂದ್ರ ಅವರಿಗೆ ಮಾಹಿತಿ ನೀಡಿದ ಮೇರೆ, ಸುಂಟಿಕೊಪ್ಪ ಠಾಣೆಯ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಮೊಬೈಲ್ ಮತ್ತು ಬಟ್ಟೆಯನ್ನು ವಶಕ್ಕೆ ಪಡೆದು ಹಿಂತೆರಳಿದ್ದರು.

ಇAದು ಬೆಳಿಗ್ಗೆ ೯ ಗಂಟೆ ಸುಮಾರಿಗೆ ಮುಬಾಷಿರ್‌ನ ಸಂಬAಧಿಕರು ಹಾಗೂ ಹೊಸತೋಟ ಗ್ರಾಮಸ್ಥರು ಗರಗಂದೂರು ಬಿ ಗ್ರಾಮದ ಹೊಳೆಯಲ್ಲಿ ಹುಡುಕಾಟ ನಡೆಸಿದ ಸಂದರ್ಭ ನೀರಿನೊಳಗೆ ಮೃತದೇಹ ದೊರೆತಿದೆ. ನಂತರ ಕುಶಾಲನಗರದ ಶವಾಗಾರಕ್ಕೆ ಕೊಂಡೊಯ್ದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ಹೃದಯಾಘಾತದಿಂದ ಅಜ್ಜಿ ನಿಧನ: ನಿನ್ನೆ ಬೆಳಿಗ್ಗೆಯಿಂದ ಕಾಣೆಯಾಗಿದ್ದ ಮೊಮ್ಮಗನ ಬಗ್ಗೆಯೇ ಚಿಂತಿಸುತ್ತಿದ್ದ ಅಜ್ಜಿ ರುಕಿಯಾ ಅವರಿಗೆ ಇಂದು ಬೆಳಿಗ್ಗೆ ಮೊಮ್ಮಗ ಸಾವನ್ನಪ್ಪಿರುವ ಸುದ್ದಿ ಬರಸಿಡಿಲಿನಂತೆ ಎರಗಿದ್ದು, ಮುಬಾಷಿರ್‌ನ ನಿಧನ ಸುದ್ದಿ ಕೇಳುತ್ತಿದ್ದಂತೆ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ.

ರಮ್ಲಾನ್ ಅವರು ವಿದೇಶದಲ್ಲಿ ನೆಲೆಸಿದ್ದು, ಹೊಸತೋಟದಲ್ಲಿ ತಾಯಿ ರುಕಿಯ, ಪತ್ನಿ ಅಪ್ಸತ್ ಹಾಗೂ ಪುತ್ರ ಮುಬಾಷಿರ್ ಇದ್ದರು. ಮೊಮ್ಮಗನ ಮೇಲೆ ಹೆಚ್ಚಿನ ಪ್ರೀತಿ ಹೊಂದಿದ್ದ ಅಜ್ಜಿ ರುಕಿಯಾ, ಆತನ ನಿಧನದ ಬೆನ್ನಲ್ಲೇ ತಾನೂ ಸಹ ಇಹಲೋಕ ತ್ಯಜಿಸಿದ್ದು, ರಮ್ಲಾನ್ ಅವರ ಮನೆಯಲ್ಲಿ ಶೋಕ ಸಾಗರ ಮಡುಗಟ್ಟಿದೆ.

ಘಟನಾ ಸ್ಥಳಕ್ಕೆ ಸುಂಟಿಕೊಪ್ಪ ಠಾಣಾಧಿಕಾರಿ ಪುನೀತ್ ಹಾಗೂ ಸಿಬ್ಬಂದಿಗಳು ತೆರಳಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ. ಸುಂಟಿಕೊಪ್ಪ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.