ಗೋಣಿಕೊಪ್ಪಲು/ಸಿದ್ದಾಪುರ ಏ. ೧೦: ಕಳೆದ ಒಂದು ವರ್ಷಗಳಿಂದ ಗೋಣಿಕೊಪ್ಪ ಸಮೀಪದ ಕಳತ್ಮಾಡಿನ ಜನರಿಗೆ ಭಯಹುಟ್ಟಿಸಿದ ಪುಂಡಾನೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.ಕಾಫಿ, ಕರಿಮೆಣಸು, ಅಡಿಕೆ, ತೆಂಗು ಇತ್ಯಾದಿ ಬೆಳೆಗಳಿಗೆ ಹಾನಿ ಮಾಡಿ ನಷ್ಟಪಡಿಸಿರುವುದಲ್ಲದೆ, ಇಲ್ಲಿಯ ಜನರನ್ನು ಭಯಭೀತಗೊಳಿಸಿ ರಾತ್ರಿಯ ವೇಳೆ ಸಂಚಾರ ಮಾಡುವ ವಾಹನದ ಮೇಲೆ ದಾಳಿ ನಡೆಸಿ ಉಪಟಳ ನೀಡುತ್ತಿದ್ದ ಸಲಗ ಇದೀಗ ಅರಣ್ಯ ಇಲಾಖೆಯ ಅತಿಥಿಯಾಗಿದ್ದಾನೆ.ಕಳತ್ಮಾಡಿನ ಸುತ್ತಮುತ್ತಲಿನ ಕಾಫಿ ತೋಟದಲ್ಲಿ ಆಗಿಂದ್ದಾಗಿಯೇ ನಾಗರಿಕರಿಗೆ ಎದುರಾಗುತ್ತಿದ್ದ ಪುಂಡಾನೆಯನ್ನು ಸೆರೆ ಹಿಡಿಯುವಂತೆ ಆಗ್ರಹಿಸಿ ಇಲ್ಲಿಯ ಜನತೆ ಅರಣ್ಯ ಇಲಾಖೆಯ ಅಧಿಕಾರಿಗಳ ಮೇಲೆ ಒತ್ತಾಯ ಹೇರಿದ್ದರು. ಇದರಿಂದ ಎಚ್ಚೆತ್ತ ಅರಣ್ಯ ಇಲಾಖೆ ಪುಂಡಾನೆಯನ್ನು ಸೆರೆ ಹಿಡಿಯಲು ಅನುಮತಿ ನೀಡಿದ್ದರು.ಇಲಾಖೆಯ ಅನುಮತಿ ದೊರೆತ ಮೇರೆ ತಾ. ೮ ರಂದು ಮತ್ತಿಗೋಡು ಹಾಗೂ ಬಲ್ಲೆ ಸಾಕಾನೆ ಶಿಬಿರಗಳಲ್ಲಿದ್ದ ಆರು ಸಾಕಾನೆಗಳಾದ ಅಭಿಮನ್ಯು, ಅರ್ಜುನ, ಗೋಪಾಲಕೃಷ್ಣ, ಗಣೇಶ, ಗಜೇಂದ್ರ, ಭೀಮನ ಸಹಾಯದಿಂದ ಕಳತ್ಮಾಡುವಿನ ಕಾಫಿ ತೋಟದಲ್ಲಿ ಕಾರ್ಯಾಚರಣೆ(ಮೊದಲ ಪುಟದಿಂದ) ಆರಂಭಿಸಿದ್ದರು. ತಾ. ೧೦ರ ಬೆಳಿಗ್ಗೆ ಮುಂಜಾನೆ ೧೦ ಗಂಟೆಗೆ ಪುಂಡಾನೆಯ ಸುಳಿವು ಸಿಕ್ಕಿದ ತರುವಾಯ ವನ್ಯಜೀವಿ ವಿಭಾಗದ ವೈದ್ಯಾಧಿಕಾರಿ ಡಾ. ಮುಜೀಬ್ ಹಾಗೂ ಶೂಟರ್ ವಿಕ್ರಂ ತಂಡ ಆನೆಯ ಮೇಲೆ ಅರವಳಿಕೆಯನ್ನು ಪ್ರಯೋಗಿಸುವಲ್ಲಿ ಯಶಸ್ವಿಯಾದರು. ಕಾರ್ಯಾಚರಣೆ ವೇಳೆಯಲ್ಲಿ ಸಲಗವು ಕಾರ್ಯಾಚರಣೆಯ ಸಿಬ್ಬಂದಿಗಳನ್ನೇ ಬೆನ್ನಟ್ಟಿದ ಪ್ರಸಂಗ ನಡೆಯಿತು.

೩೫ ವರ್ಷದ ಪ್ರಾಯದ ಗಂಡಾನೆ ಇದಾಗಿದ್ದು ಈ ಪುಂಡಾನೆಯನ್ನು ಬಂಡೀಪುರದ ಮೂಲೆ ಹೊಳೆ ಅರಣ್ಯ ಪ್ರದೇಶದಲ್ಲಿ ಬಿಡಲು ವಾಹನದ ಮೂಲಕ ಮಧ್ಯಾಹ್ನ ೨ ಗಂಟೆಗೆ ಕರೆದೊಯ್ಯಲಾಯಿತು. ಪುಂಡಾನೆ ಯನ್ನು ಸೆರೆ ಹಿಡಿದಿರುವುದರಿಂದ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದಾರೆ. ಪುಂಡಾನೆಯನ್ನು ಸೆರೆ ಹಿಡಿಯಲು ಗ್ರಾಮದ ಪ್ರಮುಖರಾದ ಕೊಲ್ಲೀರ ಧರ್ಮಜ, ಕೊಲ್ಲೀರ ಗೋಪಿ ಚಿಣ್ಣಪ್ಪ, ಹೊಸೂರು ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷ ಕೊಲ್ಲೀರ ಧನುಪೂಣಚ್ಚ, ಚೆಪ್ಪುಡೀರ ಶೆರಿ, ಕರ್ನಲ್ ಮುತ್ತಣ್ಣ, ಜಮ್ಮಡ ಗಣೇಶ್, ಮೋಹನ್, ಜಗನ್, ಕೊಲ್ಲೀರ ಉಮೇಶ್, ಸತೀಶ್, ಬಿ.ಎನ್. ರಾಜ, ಸೇರಿದಂತೆ ಗ್ರಾಮದ ಪ್ರಮುಖರು ಆರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಸಹಕಾರ ನೀಡಿದರು. ಆನೆ ಕಾರ್ಯಾಚರಣೆಯಲ್ಲಿ ಡಿಎಫ್‌ಒ ಚಕ್ರಪಾಣಿ, ಎಸಿಎಫ್ ಉತ್ತಪ್ಪ, ತಿತಿಮತಿ ಆರ್‌ಎಫ್‌ಒ ಅಶೋಕ್ ಹುನಗುಂದ, ಪೊನ್ನಂಪೇಟೆ ಆರ್‌ಎಫ್‌ಒ ರಾಜಪ್ಪ, ಸೇರಿದಂತೆ ಅನೇಕ ಅಧಿಕಾರಿಗಳು, ಇಲಾಖೆಯ ಸಿಬ್ಬಂದಿಗಳು ಸಾಕಾನೆಯ ಮಾವುತರು, ಕಾವಾಡಿಗಳು, ಭಾಗವಹಿಸಿದ್ದರು.

ಉಳಿದ ಪುಂಡಾನೆ ಸೆರೆಗೆ ಆಗ್ರಹ

ಗ್ರಾಮದಲ್ಲಿ ಹೆಚ್ಚಾಗಿ ಕಾಡಾನೆಗಳು ರೈತರ ಕಾಫಿ ತೋಟದಲ್ಲಿ ಬೀಡು ಬಿಟ್ಟಿವೆ. ಇದರಿಂದಾಗಿ ತೋಟದ ಕೆಲಸಕ್ಕೆ ತೆರಳಲು ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ.ಭಯದ ವಾತಾವರಣದಲ್ಲಿ ಕಾರ್ಮಿಕರು ಕೆಲಸ ನಿರ್ವಹಿಸುವ ಪರಿಸ್ಥಿತಿ ಬಂದೊದಗಿದೆ. ಇದೀಗ ಒಂದು ಪುಂಡಾನೆಯನ್ನು ಮಾತ್ರ ಸೆರೆ ಹಿಡಿಯಲಾಗಿದೆ ಇನ್ನೂ ಕೂಡ ಪುಂಡಾನೆಗಳು ಈ ಭಾಗದಲ್ಲಿ ನೆಲೆಸಿವೆ. ಇವುಗಳನ್ನು ಕೂಡ ಸೆರೆ ಹಿಡಿಯಬೇಕೆಂದು ಹೊಸೂರು ಗ್ರಾ.ಪಂ. ಉಪಾಧ್ಯಕ್ಷ ಕೊಲ್ಲೀರ ಧನು ಪೂಣಚ್ಚ ಆಗ್ರಹಿಸಿದ್ದಾರೆ.

ಆನೆ ಕಾರ್ಯಾಚರಣೆ ಸಂದರ್ಭ ತೋಟಗಳು ನಾಶವಾಗಿದೆ. ಈ ಬಗ್ಗೆ ಅರಣ್ಯ ಇಲಾಖೆಯ ಗಮನ ಸೆಳೆದಿದ್ದು, ಪರಿಹಾರದ ಭರವಸೆ ನೀಡಿದ್ದಾರೆ ಎಂದು ಗ್ರಾಮದ ಪ್ರಮುಖ ಕೊಲ್ಲೀರ ಗೋಪಿ ಚಿಣ್ಣಪ್ಪ ತಿಳಿಸಿದ್ದಾರೆ.

-ಹೆಚ್.ಕೆ. ಜಗದೀಶ್,

ವಾಸು ಎ.ಎನ್.