ಮಡಿಕೇರಿ, ಏ. ೯: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕೇಂದ್ರ ಹಾಗೂ ಮೂರ್ನಾಡು ಪ್ರಾಥಮಿಕ ಆರೋಗ್ಯ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ಮೂರ್ನಾಡು ಪದವಿಪೂರ್ವ ಕಾಲೇಜಿನಲ್ಲಿ ವಿಶ್ವ ಕ್ಷಯರೋಗ ದಿನಾಚರಣೆಯ ಪ್ರಯುಕ್ತ “ಕ್ಷಯರೋಗದ ಬಗ್ಗೆ ಅರಿವು” ಮೂಡಿಸುವ ಕಾರ್ಯಕ್ರಮ ಹಾಗೂ ರಸಪ್ರಶ್ನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಜಿಲ್ಲಾ ಆರೋಗ್ಯ ಕೇಂದ್ರದ ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಎಂ. ಮಹದೇವಪ್ಪ ಅವರು ವಿದ್ಯಾರ್ಥಿಗಳಿಗೆ ಕ್ಷಯರೋಗದ ಬಗ್ಗೆ ಅರಿವನ್ನು ಮೂಡಿಸಿದರು. ಕಾಲೇಜಿನ ಸುಮಾರು ೬೦ ವಿದ್ಯಾರ್ಥಿಗಳು ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಥಮ ಬಹುಮಾನವನ್ನು ಅನನ್ಯ ಎಂ.ಪಿ., ದ್ವಿತೀಯ ಬಹುಮಾನವನ್ನು ಹರ್ಷಿತ ಎಂ.ಸಿ. ಹಾಗೂ ತೃತೀಯ ಬಹುಮಾನವನ್ನು ಪೂಜಾ ಬಿ.ಎಲ್. ರವರು ಪಡೆದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಪಿ.ಎಂ. ದೇವಕಿ ವಹಿಸಿದ್ದರು. ಹಿರಿಯ ಕ್ಷಯರೋಗ ಪ್ರಯೋಗ ಶಾಲಾ ಮೇಲ್ವಿಚಾರಕ ಸಚಿನ್ ಬಿ. ಹಾಗೂ ಆರೋಗ್ಯ ನಿರೀಕ್ಷಕ ಚರಣ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎನ್.ಎಸ್.ಎಸ್. ಅಧಿಕಾರಿ ಯು.ಸಿ. ಮಾಲತಿ ಸ್ವಾಗತಿಸಿದರು. ಉಪನ್ಯಾಸಕಿ ಸರೋಜಿನಿ ವಂದಿಸಿದರು.