ಕೂಡಿಗೆ, ಏ. ೮: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನತ್ತೂರು ಗ್ರಾಮದಲ್ಲಿ ನೀರು ಅಶುದ್ಧವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಕೊಳವೆ ಬಾವಿಯಿಂದ ಬರುವ ನೀರು ಕಂದು ಬಣ್ಣದಾಗಿದ್ದು ಕಳೆದ ಒಂದು ವಾರದಿಂದ ಕುಡಿಯುವ ನೀರಿನ ಸಮಸ್ಯೆಯಾಗಿದೆ.

ಬಸವನತ್ತೂರು ಗ್ರಾಮದ ಬಾವಿಯನ್ನು ಕಳೆದ ವರ್ಷದಲ್ಲಿ ಕೊರೆಸಿ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿತ್ತು. ಆದರೆ ಕಳೆದ ಒಂದು ವಾರದಿಂದ ಈ ಭಾಗದ ಕೊಳವೆ ಬಾವಿಯಿಂದ ಬರುವ ನೀರು ಕಂದು ಬಣ್ಣವಾಗಿರುವುದರಿಂದ ಕುಡಿಯಲು ಯೋಗ್ಯವಾಗಿರುವುದಿಲ್ಲ. ಅಲ್ಲದೆ ಈ ನೀರಿನಿಂದ ಸ್ನಾನ ಮಾಡಿದರೆ ಕಜ್ಜಿ ಬರುತ್ತಿವೆ ಎಂದು ಸ್ಥಳೀಯರು ನೋವು ತೋಡಿಕೊಂಡಿದ್ದಾರೆ.

ಕಳೆದ ಒಂದು ವಾರದಿಂದ ಈ ಬಗ್ಗೆ ಸಂಬAಧಿಸಿದವರಿಗೆ ತಿಳಿಸಿದರು ಯಾವುದೇ ಪ್ರಯೋಜನ ಆಗಿಲ್ಲ. ತಾಲೂಕು ಮಟ್ಟದ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಸಂಬAಧಿಸಿದ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆಯನ್ನು ಮಾಡಲಾಗುವುದು ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.

ನೀರನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಬದಲಿ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದು ಪಿಡಿಓ ಸಂತೋಷ್ ತಿಳಿಸಿದ್ದಾರೆ.