ವೀರಾಜಪೇಟೆ, ಏ. ೮: ವೀರಾಜಪೇಟೆ ಅರಣ್ಯ ವಲಯದ ಪಾಲಿಬೆಟ್ಟ ವ್ಯಾಪ್ತಿಯಲ್ಲಿ ನಿರಂತರ ಕಾಡಾನೆಗಳ ಹಾವಳಿಯಿಂದ ಕಂಗೆಟ್ಟಿರುವ ಸಾರ್ವಜನಿಕರು ತಾಲೂಕು ಪಂಚಾಯಿತಿ ಸದಸ್ಯ ಕುಟ್ಟಂಡ ಅಜಿತ್ ಕರಂಬಯ್ಯ ಹಾಗೂ ಮಾಲ್ದಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಟಿ.ಎಸ್. ಸಮೀರ್ ನೇತೃತ್ವದಲ್ಲಿ ವೀರಾಜಪೇಟೆ ವಲಯ ಅರಣ್ಯ ಉಪ ಸಂರಕ್ಷಣಾಧಿಕಾರಿ ಚಕ್ರಪಾಣಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಪಾಲಿಬೆಟ್ಟ ವ್ಯಾಪ್ತಿಯಲ್ಲಿ ಹಗಲು ಸಮಯದಲ್ಲಿಯೇ ಕಾಡಾನೆಗಳು ನಾಡಿಗೆ ಲಗ್ಗೆ ಇಡುತ್ತಿರುವುದರಿಂದ ಕಾಡಾನೆಗಳ ಚಲನವಲನಗಳನ್ನು ರವಾನಿಸುವ ಡಿಜಿಟಲ್ ಸೈನ್ ಬೋರ್ಡ್ಗಳನ್ನು ಅಳವಡಿಸಿದರೆ ಸಾರ್ವಜನಿಕರು ಕಾಡಾನೆ ಹಾವಳಿ ಯಿಂದ ತಪ್ಪಿಸಿಕೊಳ್ಳಬಹುದಾಗಿದೆ. ಕಂಪೆನಿ ಕಾಫಿ ತೋಟಗಳ ರಸ್ತೆಗಳು, ಹಾಡಿಗಳು, ಕಾಲೋನಿಗಳಿಗೆ ತೆರಳುವ ರಸ್ತೆಗಳಲ್ಲಿ ಸೋಲಾರ್ ದೀಪಗಳನ್ನು ಅಳವಡಿಸಬೇಕು. ಹೆಚ್ಚುವರಿಯಾಗಿ ಗಸ್ತು ಸಿಬ್ಬಂದಿಗಳನ್ನು ನೇಮಕ ಮಾಡಬೇಕು. ಮಾಲ್ದಾರೆ ಮುಖ್ಯ ರಸ್ತೆಯಲ್ಲಿ ಅರಣ್ಯ ತಪಾಸಣಾ ಗೇಟ್ ಇದ್ದು ೨೪ ಗಂಟೆಗಳು ತೆರೆದಿರುತ್ತದೆ. ಆ ಮಾರ್ಗವಾಗಿ ಕಾಡಾನೆಗಳು ರಾಜಾರೋಷವಾಗಿ ನಾಡಿಗೆ ಬರುತ್ತಿವೆ. ಸಿಬ್ಬಂದಿಗಳನ್ನು ನೇಮಿಸಿ ಗೇಟ್ ಮುಚ್ಚಿಸಿ ವಾಹನ ಸಂಚಾರಕ್ಕೆ ಮಾತ್ರ ಅನುವು ಮಾಡಿಕೊಡಬೇಕು.
ಆನೆಗಳು ನಾಡಿಗೆ ಬಾರದಂತೆ ರಸ್ತೆ ಬದಿಯಲ್ಲಿ ಕಂದಕಗಳನ್ನು ನಿರ್ಮಾಣ ಮಾಡಿ ಮಣ್ಣನ್ನು ಅರಣ್ಯದೊಳಗೆ ಹಾಕದೆ ರಸ್ತೆ ಬದಿಯಲ್ಲಿ ಹಾಕಿದರೆ ಆನೆಗಳಿಗೆ ಸುಲಭವಾಗಿ ನಾಡಿನೊಳಗೆ ಬರಲು ಸಾಧ್ಯವಾಗುವುದಿಲ್ಲ. ಸರ್ಕಾರವು ಶೇ. ೭೫ ರಷ್ಟು ಸಬ್ಸಿಡಿ ನೀಡಿದರೆ ಸೋಲಾರ್ ಬೇಲಿಯನ್ನು ನಿರ್ಮಾಣ ಮಾಡಿಕೊಳ್ಳಬಹುದು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಮನವಿ ಸ್ವೀಕರಿಸಿದ ವೀರಾಜಪೇಟೆ ವಲಯ ಅರಣ್ಯ ಉಪ ಸಂರಕ್ಷಣಾಧಿಕಾರಿ ಚಕ್ರಪಾಣಿ ಮಾತನಾಡಿ, ಮನವಿಯಲ್ಲಿ ಉಲ್ಲೇಖ ಮಾಡಿರುವ ವಿಚಾರಗಳನ್ನು ಶೀಘ್ರದಲ್ಲಿಯೇ ಬಗೆಹರಿಸಲಾಗುವುದು. ಕಾಡಾನೆಗಳ ಚಲನವಲನಗಳನ್ನು ಸಂಗ್ರಹ ಮಾಡಿ ಸಾರ್ವಜನಿಕರಿಗೆ ಮಾಹಿತಿ ನೀಡುವ ಘಟಕವನ್ನು ವೀರಾಜಪೇಟೆ ವಲಯ ಕಚೇರಿಯಲ್ಲಿ ಸ್ಥಾಪಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ಈಗಾಗಲೇ ಅನನ್ಯ, ಆಕಾಂಕ್ಷ, ಮೀರಾ ಎಂಬ ೩ ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಲಾಗಿದೆ. ಮೇ ೩೧ ರೊಳಗೆ ಉಳಿದ ಹೆಣ್ಣಾನೆಗಳ ಹಿಂಡುಗಳನ್ನು ಗುರುತಿಸಿ ರೇಡಿಯೋ ಕಾಲರ್ ಅಳವಡಿಸಲಾಗುವುದು. ಮಾನವ ಮೃತ್ಯು ಮಾಡುತ್ತಿರುವ ಒಂದು ಕಾಡಾನೆಯನ್ನು ಹಿಡಿದು ರೇಡಿಯೋ ಕಾಲರ್ ಅಳವಡಿಸಿ ಸ್ಥಳಾಂತರ ಮಾಡಲಾಗುವುದು. ತೋಟ ಮಾಲೀಕರು ಕೂಡ ತಮ್ಮ ತೋಟಗಳಲ್ಲಿ ಸಿಬ್ಬಂದಿಗಳನ್ನು ನೇಮಿಸಿಕೊಂಡು ಇಲಾಖೆಗೆ ಮಾಹಿತಿ ನೀಡಿ ಸಹಕರಿಸುವಂತೆ ಕೋರಿದರು.
ಈ ಸಂದರ್ಭ ಮಾಲ್ದಾರೆ ಗ್ರಾಮ ಪಂಚಾಯಿತಿ ಸದಸ್ಯ ಮಹಮದ್, ಮೇಕೂರು ಪಾಲಿಬೆಟ್ಟ ಹಿತರಕ್ಷಣಾ ಸಮಿತಿ ಅಧ್ಯಕ್ಷ ಚೇಂದ್ರಿಮಾಡ ಕಿಟ್ಟು ಸೋಮಯ್ಯ, ಸೋಮೇಯಂಡ ನಂದಾ ಚಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.