ಕುಶಾಲನಗರ, ಏ. ೬: ಕೊಡಗು ಜಿಲ್ಲೆಯ ಎಲ್ಲೆಡೆ ಪಟ್ಟಣ, ಗಡಿಭಾಗಗಳಲ್ಲಿ ವಾಹನ ಮತ್ತು ವಾಹನ ಸವಾರರಿಗೆ ಸಮರ್ಪಕವಾಗಿ ಸಂಚಾರಿ ನಿಯಮಗಳನ್ನು ಪಾಲಿಸುವಂತೆ ನೋಡಿಕೊಳ್ಳಲು ಹಗಲು ರಾತ್ರಿ ದುಡಿಯುತ್ತಿರುವ ಪೊಲೀಸ್ ಇಲಾಖೆಯ ಕಾರ್ಯಕ್ಕೆ ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತಗೊಳ್ಳುತ್ತಿರುವುದಂತೂ ನಿಜ.
ಅಪಘಾತ ನಿಯಂತ್ರಣ ಮಾಡುವ ಹಿನ್ನೆಲೆಯಲ್ಲಿ ಗಡಿಭಾಗಗಳಲ್ಲಿ ಹೈವೇ ಪ್ಯಾಟ್ರೋಲಿಂಗ್ ಸೇರಿದಂತೆ ಆಯಕಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಆಗಾಗ್ಗೆ ವಾಹನ ಸವಾರರನ್ನು ಅಡ್ಡಗಟ್ಟಿ ವಾಹನಗಳ ದಾಖಲೆಗಳು, ಸವಾರನ ಪರವಾನಗಿ ಪತ್ರ ಪರಿಶೀಲನೆ ಮಾಡುವ ಮೂಲಕ ಸಮರ್ಪಕ ರಸ್ತೆ ಸಂಚಾರ ಹಾಗೂ ಹೆಲ್ಮೆಟ್ ರಹಿತ ವಾಹನ ಸವಾರರಿಗೆ ದಂಡ ವಿಧಿಸುತ್ತಿರುವುದು ಸಾಮಾನ್ಯ ದೃಶ್ಯವಾಗಿದೆ.
ಈ ನಡುವೆ ದಂಡ ತೆತ್ತು ತೆತ್ತು ಸುಸ್ತಾದ ಕೆಲವು ವಾಹನಗಳ ಸವಾರರು ಇದೀಗ ಪೊಲೀಸ್ ಇಲಾಖೆಯ ವಾಹನಗಳ ದಾಖಲೆಗಳನ್ನೇ ಆನ್ ಲೈನ್ ಮೂಲಕ ಪರಿಶೀಲನೆ ಮಾಡಲು ಹೊರಟಿರುವುದು ‘ಶಕ್ತಿ’ ಗಮನಕ್ಕೆ ಬಂದಿದೆ.
ತಮ್ಮ ವಾಹನಗಳ ದಾಖಲೆ ಪರಿಶೀಲನೆ ಮಾಡುವ ಇವರು ಎಷ್ಟರಮಟ್ಟಿಗೆ ತಮ್ಮ ಇಲಾಖೆಯ ವಾಹನಗಳ ದಾಖಲೆ ಇಟ್ಟುಕೊಳ್ಳುತ್ತಾರೆ ಅನ್ನುವುದು ಇದೀಗ ಪತ್ತೆಹಚ್ಚಿದ್ದಾರೆ.
ಕುಶಾಲನಗರ-ಸುಂಟಿಕೊಪ್ಪ ನಡುವೆ ಕರ್ತವ್ಯದಲ್ಲಿರುವ ಹೈವೇ ಪ್ಯಾಟ್ರೋಲಿಂಗ್ ವಾಹನದ ದಾಖಲೆ ಪರಿಶೀಲಿಸಿದಾಗ, ಆ ವಾಹನದ ಇನ್ಶುರೆನ್ಸ್ ೨೦೧೯ ಜನವರಿ ೧೮ಕ್ಕೆ ಲ್ಯಾಪ್ಸ್ ಆಗಿರುವುದು ಕಂಡುಬAದಿದೆ. ಇನ್ನು ಮತ್ತೊಂದು ವಾಹನದ ದಾಖಲೆ ನೋಡಿದರೆ, ಅದರ ವಿಮೆ ೨೦೧೯ ಆಗಸ್ಟ್ ೩೧ರ ನಂತರ ನವೀಕರಣಗೊಂಡಿಲ್ಲ.
ಇನ್ನೂ ಹಲವು ಪೊಲೀಸ್ ಅಧಿಕಾರಿಗಳು ಓಡಾಡುವ ವಾಹನಗಳ ದಾಖಲೆ ಕೂಡಾ ಇದೇ ರೀತಿ ಇರುವುದಾಗಿ ಚಿತ್ರದಲ್ಲಿ ಗಮನಿಸಬಹುದಾಗಿದೆ. ಪೊಲೀಸ್ ವರಿಷ್ಠರು ಈ ಬಗ್ಗೆ ಪರಿಶೀಲನೆ ಮಾಡಲು ಮುಂದಾಗುವAತೆ ಸ್ಥಳೀಯರು ಪತ್ರಿಕೆಯ ಮೂಲಕ ಆಗ್ರಹಿಸಿದ್ದಾರೆ. -ಚಂದ್ರ ಮೋಹನ್