ಕೂಡಿಗೆ, ಏ. ೩: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನತ್ತೂರು ಗ್ರಾಮದ ಸರ್ವೆ ನಂಬರ್ ೧/೧ ರಲ್ಲಿ ಹತ್ತು ಎಕರೆಗಳಷ್ಟು ಪ್ರದೇಶದಲ್ಲಿ ಕಳೆದ ೨೫ ವರ್ಷಗಳಿಂದಲೂ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೂರಾರು ನಿವೇಶನ ರಹಿತರಿಗೆ ನಿವೇಶನದ ಜಾಗ ದೊರಕಿಲ್ಲ.

ಕೂಡುಮಂಗಳೂರು ಗ್ರಾಮ ಪಂಚಾಯಿತಿಯು ೨೩ ಸದಸ್ಯರನ್ನು ಹೊಂದಿರುವ ದೊಡ್ದ ಪಂಚಾಯಿತಿಯಾಗಿದ್ದು, ಈ ವ್ಯಾಪ್ತಿಯ ಅನೇಕ ಕೂಲಿ ಕಾರ್ಮಿಕರು ಮತ್ತು ನಿವೇಶನ ರಹಿತರು ಬಡತನದ ರೇಖೆಯಲ್ಲಿದ್ದಾರೆ. ಮನೆ ರಹಿತ ಫಲಾನುಭವಿಗಳ ಪಟ್ಟಿಗೆ ಆಯ್ಕೆಯಾದರೂ ಮನೆ ನಿರ್ಮಾಣಕ್ಕೆ ಜಾಗವಿಲ್ಲದೆ ಸರಕಾರ ನೀಡುವ ನಿವೇಶನದ ಯೋಜನೆಯಿಂದ ವಂಚಿತರಾಗಿದ್ದಾರೆ.

ಈ ಜಾಗದ ಜೊತೆಯಲ್ಲಿ ಆನೆಕೆರೆಯ ಸಮೀಪದ ೬ ಎಕರೆಗಳಷ್ಟು ವಿಸ್ತೀರ್ಣದ ಕಂದಾಯ ಇಲಾಖೆಯ ಜಾಗವಿದ್ದು, ಕಂದಾಯ ಇಲಾಖೆಯವರು ಸರ್ವೆ ನಡೆಸಿ ಸಮರ್ಪಕವಾಗಿ ಜಾಗದ ಹದ್ದುಬಸ್ತು ಗುರುತಿಸಿ ಸರಿಪಡಿಸುವುದಾಗಿ ಹೇಳುತ್ತಿದ್ದಾರೆ ಹೊರತು ಇನ್ನೂ ಕಾರ್ಯಗತವಾಗಿಲ್ಲ.

ಕಳೆದ ೮ ವರ್ಷಗಳ ಹಿಂದೆ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನತ್ತೂರು ಗ್ರಾಮದಲ್ಲಿ ಎರಡು ಬಾರಿ ಕಂದಾಯ ಇಲಾಖೆಯ ವತಿಯಿಂದ ಸರ್ವೆ ನಡೆಸಿದ್ದು, ಇದುವರೆಗೂ ಯಾವುದೇ ರೀತಿಯ ನಿವೇಶನ ಹಂಚುವ ವಿಷಯ ಚರ್ಚೆಗೆ ಬಂದಿಲ್ಲ.

ಕ್ಷೇತ್ರದ ಶಾಸಕರಿಗೆ ಈ ವಿಷಯದ ಬಗ್ಗೆ ಸ್ಥಳೀಯರು ತಿಳಿಸಿದಾಗ ಅಧಿಕಾರಿಗಳಿಗೆ ಸರ್ವೆ ನಡೆಸಿ ಸಮಗ್ರವಾದ ಮಾಹಿತಿಯನ್ನು ನೀಡುವಂತೆ ಸೂಚನೆ ನೀಡಿರುತ್ತಾರೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ.

ಈಗಾಗಲೇ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯವರು ಪ್ರಥಮ ಮಾಸಿಕ ಸಭೆಯಲ್ಲಿ ನಿವೇಶನ ರಹಿತರಿಗೆ ನಿವೇಶನವನ್ನು ಒದಗಿಸುವ ಚಿಂತನೆಯನ್ನು ಹೊಂದಿದ್ದು, ಅದಕ್ಕೆ ಪೂರಕವಾಗಿ ಅರ್ಹ ಫಲಾನುಭವಿಗಳ ಪಟ್ಟಿಯನ್ನು ತಯಾರಿಸಿ ತಾಲೂಕು ಪಂಚಾಯಿತಿ ಸಹಕಾರದೊಂದಿಗೆ ಮತ್ತು ಶಾಸಕರ ಸೂಚನೆಯಂತೆ ಅರ್ಜಿಗಳನ್ನು ಸಂಬAಧಿಸಿದ ಇಲಾಖೆಗೆ ಕಳುಹಿಸಿ ವಸತಿ ರಹಿತರಿಗೆ ನಿವೇಶನವನ್ನು ನೀಡುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಸAಬAಧಿಸಿದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಅರ್ಹ ಫಲಾನುಭವಿಗಳಿಗೆ ಅನುಕೂಲವಾಗುವಂತೆ ಶೀಘ್ರವಾಗಿ ಕಾರ್ಯನ್ಮುಖರಾಗಬೇಕೆಂದು ನಿವೇಶನ ರಹಿತ ನೂರಾರು ಗ್ರಾಮಸ್ಥರು ಆಗ್ರಹಿಸಿದ್ದಾರೆ.

- ಕೆ.ಕೆ. ನಾಗರಾಜಶೆಟ್ಟಿ.