ಮಡಿಕೇರಿ, ಮಾ. ೩೧: ಭಾರತೀಯ ಸೇನೆಯಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರುಗಳ ಅಸಾಧಾರಣ ಸಾಧನೆಯನ್ನು ಗೌರವಿಸಿ ಫೀ.ಮಾ. ಕಾರ್ಯಪ್ಪ ಹಾಗೂ ಜ. ತಿಮ್ಮಯ್ಯ ಅವರ ಅಧ್ಯಯನ ಪೀಠವನ್ನು ಮೈಸೂರು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾರಂಭಿಸಬೇಕು. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಸಂಬAಧಿಸಿದವರ ಮೇಲೆ ಒತ್ತಡ ಹೇರುವಂತಾಗಬೇಕು ಎಂದು ಫೀ.ಮಾ. ಕಾರ್ಯಪ್ಪ - ಜ. ತಿಮ್ಮಯ್ಯ ಫೋರಂನ ಅಧ್ಯಕ್ಷ ಕರ್ನಲ್ ಕೆ.ಸಿ. ಸುಬ್ಬಯ್ಯ ಒತ್ತಾಯಿಸಿದರು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಫೀ.ಮಾ. ಕಾರ್ಯಪ್ಪ - ಜ. ತಿಮ್ಮಯ್ಯ ಫೋರಂ ಸಹಕಾರದೊಂದಿಗೆ ನಗರದ ಜ.ತಿಮ್ಮಯ್ಯ ಮ್ಯೂಸಿಯಂನಲ್ಲಿ ಆಯೋಜಿಸಲಾಗಿದ್ದ ಜ. ತಿಮ್ಮಯ್ಯ ಅವರ ೧೧೫ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿಶ್ವವಿದ್ಯಾನಿಲಯಗಳಲ್ಲಿ ಸೆನೆಟ್ ಹಾಗೂ ಸಿಂಡಿಕೇಟ್ ಸದಸ್ಯರುಗಳಾಗಿ ಮಾಜಿ ಸೈನಿಕರಿಗೆ ಅವಕಾಶ ನೀಡುವಂತಾಗಬೇಕು. ಜ. ತಿಮ್ಮಯ್ಯ ಮ್ಯೂಸಿಯಂ ಸ್ಥಾಪನೆಯಲ್ಲಿ ಹೆಚ್ಚಿನ ಶ್ರಮ ವಹಿಸಿರುವ ಫೋರಂನ ಸದಸ್ಯರುಗಳಿಗೆ ಜ. ತಿಮ್ಮಯ್ಯ ಮ್ಯೂಸಿಯಂ ಸಮಿತಿಯಲ್ಲಿ ಸ್ಥಾನ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೆ.ಎಸ್. ದೇವಯ್ಯ ಮಾತನಾಡಿ ಕೊಡಗು ಚಿಕ್ಕ ಜಿಲ್ಲೆಯಾದರೂ ದೇಶ ಸೇವೆಗೆ ಹೆಚ್ಚಿನ ಕೊಡುಗೆ ನೀಡಿದೆ. ಇದು ಹೆಮ್ಮೆಯ ವಿಚಾರ

(ಮೊದಲ ಪುಟದಿಂದ) ಎಂದರಲ್ಲದೆ ಕೊಡಗು ವಿಶ್ವವಿದ್ಯಾನಿಲಯ ಸ್ಥಾಪನೆಯಾಗಬೇಕು ಎಂದು ಒತ್ತಾಯಿಸಿದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಅಪ್ಪಚ್ಚುರಂಜನ್ ಮಾತನಾಡಿ ಕಾರ್ಯಪ್ಪ-ತಿಮ್ಮಯ್ಯ ಫೋರಂನ ಬೇಡಿಕೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ತಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ಭರವಸೆಯಿತ್ತರು. ಅಲ್ಲದೆ ಕೊಡವ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕೆಂದರು.

ಇದೇ ಸಂದರ್ಭ ಮೊಣ್ಣಂಡ ಶೋಭಾ ಸುಬ್ಬಯ್ಯ ಅವರು ಕೊಡವ ಭಾಷೆಗೆ ತರ್ಜುಮೆ ಮಾಡಿರುವ ಡಾ. ಐ.ಮಾ. ಮುತ್ತಣ್ಣ ಅವರು ಬರೆದಿರುವ ಜನರಲ್ ತಿಮ್ಮಯ್ಯ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಸುಂಟಿಕೊಪ್ಪದ ಸಂತ ಅಂಥೋಣಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಶ್ರೀಷಾ ಜನರಲ್ ತಿಮ್ಮಯ್ಯ ಅವರ ಕುರಿತಾಗಿ ಮಾಡಿದ ಭಾಷಣ ಗಮನ ಸೆಳೆಯಿತು. ಜ. ತಿಮ್ಮಯ್ಯ ಜನ್ಮದಿನಾಚರಣೆ ಪ್ರಯುಕ್ತ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.

ವೇದಿಕೆಯಲ್ಲಿ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ. ಪಾರ್ವತಿ ಅಪ್ಪಯ್ಯ, ಸಾಹಿತಿ ಶೋಭಾ ಸುಬ್ಬಯ್ಯ, ಫೋರಂ ಪ್ರಮುಖರಾದ ಮೇಜರ್ ನಂಜಪ್ಪ, ಮೇಜರ್ ಜನರಲ್ ಕುಪ್ಪಂಡ ನಂಜಪ್ಪ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮಕ್ಕೂ ಮುನ್ನ ಯುದ್ಧ ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು. ಜನರಲ್ ತಿಮ್ಮಯ್ಯ ಶಾಲೆಯ ಮಕ್ಕಳು ವಂದೇ ಮಾತರಂ, ನಾಡಗೀತೆ ಹಾಡಿದರು. ಬೊಟ್ಟೋಳಂಡ ಕಾಶಿ ಅಚ್ಚಯ್ಯ, ನಾಪಂಡ ಈರಪ್ಪ ಬಾಳೋಪಾಟ್ ಹಾಡಿದರು. ಅಕಾಡೆಮಿಯ ರಿಜಿಸ್ಟಾçರ್ ಎ.ಸಿ. ಗಿರೀಶ್ ಕಾರ್ಯಕ್ರಮ ನಿರ್ವಹಿಸಿದರು.