ಸೋಮವಾರಪೇಟೆ, ಮಾ. ೨೭: ಸಮೀಪದ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಜೂರು, ಯಡವಾರೆ ವ್ಯಾಪ್ತಿಯ ಜನವಸತಿ ಹಾಗೂ ಕೃಷಿ ಪ್ರದೇಶದಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಅರಣ್ಯ ಇಲಾಖಾ ಸಿಬ್ಬಂದಿಗಳು ಸ್ಥಳಿಯರ ಸಹಕಾರದಿಂದ ಯಡವನಾಡು ಮೀಸಲು ಅರಣ್ಯಕ್ಕೆ ಅಟ್ಟಿದರು.

ಕಾಜೂರು, ಯಡವಾರೆ ವ್ಯಾಪ್ತಿಯ ವರದರಾಜ್ ಅರಸ್, ರಾಯ್, ಷಣ್ಮುಖ ಸೇರಿದಂತೆ ಇತರರ ಕಾಫಿ ತೋಟದಲ್ಲಿ ಬೀಡುಬಿಟ್ಟಿದ್ದ ಹತ್ತಕ್ಕೂ ಅಧಿಕ ಕಾಡಾನೆಗಳನ್ನು ಮಾದಾಪುರ ಉಪ ವಲಯ ಅರಣ್ಯಾಧಿಕಾರಿ ಜಗದೀಶ್ ಅವರ ನೇತೃತ್ವದಲ್ಲಿ ಸಿಬ್ಬಂದಿಗಳು ಹಾಗೂ ಸ್ಥಳೀಯರು ಅರಣ್ಯಕ್ಕೆ ಅಟ್ಟಿದರು.

ಕಾರ್ಯಾಚರಣೆಯಲ್ಲಿ ಅರಣ್ಯ ರಕ್ಷಕರಾದ ಭರಮಪ್ಪ, ಈರಣ್ಣ ದಳವಾಯಿ, ಅರಣ್ಯ ವೀಕ್ಷಕರಾದ ವೀರಪ್ಪ, ಹರ್ಷಿತ್, ವಿನು, ಸಂತೋಷ್, ಆರ್‌ಆರ್‌ಟಿ ಸಿಬ್ಬಂದಿಗಳು, ಗ್ರಾಮಸ್ಥರಾದ ರಾಯ್, ವರದ, ಗಣೇಶ್, ದಿನೇಶ್, ರವಿ, ಮಿಟ್ಟು ಅವರುಗಳು ಭಾಗವಹಿಸಿದ್ದರು.

ಈ ಭಾಗದಲ್ಲಿ ನಿರಂತರವಾಗಿ ಕಾಡಾನೆಗಳ ಹಾವಳಿ ನಡೆಯುತ್ತಿದ್ದು, ಜನಸಾಮಾನ್ಯರು ಭಯದೊಂದಿಗೆ ಜೀವನ ಸಾಗಿಸುವಂತಾಗಿದೆ. ಇದರೊಂದಿಗೆ ಕೃಷಿ ಬೆಳೆಗಳೂ ಹಾನಿಗೀಡಾಗುತ್ತಿವೆ. ಈ ಹಿನ್ನೆಲೆ ಕೋವರ್‌ಕೊಲ್ಲಿಯಿಂದ ಹಾರಂಗಿ ಹಿನ್ನೀರು ಪ್ರದೇಶದವರೆಗೆ ರೈಲ್ವೇ ಕಂಬಿಗಳ ಬೇಲಿ ನಿರ್ಮಿಸಲು ಅರಣ್ಯ ಇಲಾಖೆ ಹಾಗೂ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರಾದ ಮಚ್ಚಂಡ ಅಶೋಕ್, ಪ್ರಕಾಶ್, ಕೃಷ್ಣಪ್ಪ, ಪ್ರಮೋದ್, ಲಿಂಗೇರಿ ರಾಜೇಶ್ ಸೇರಿದಂತೆ ಇತರರು ಆಗ್ರಹಿಸಿದ್ದಾರೆ.