ನಾಪೋಕ್ಲು, ಮಾ. ೨೭: ಮಾರುತಿ ಕಾರಿನಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದ ಕಾರಣ ಕಾರು ಹೊತ್ತಿ ಉರಿದು ಪ್ರಯಾಣಿಕರು ಅಪಾಯದಿಂದ ಪಾರಾದ ಘಟನೆ ಪಾರಾಣೆ ಕೊಣಂಜಗೇರಿ ಗ್ರಾಮ ಪಂಚಾಯಿತಿಯ ಕೈಕಾಡು ಗ್ರಾಮದಲ್ಲಿ ಸಂಭವಿಸಿದೆ.

ಶುಕ್ರವಾರ ರಾತ್ರಿ ೧೧ ಗಂಟೆ ಸುಮಾರಿಗೆ ಕಡಂಗದ ಜಾಬೀರ್ ಎಂಬವರು ಚಲಾಯಿಸುತ್ತಿದ್ದ ಕಾರು ಅವಘಡಕ್ಕೆ ಸಿಲುಕಿದೆ. ಎಮ್ಮೆಮಾಡು ಗ್ರಾಮದಿಂದ ಕಡಂಗಕ್ಕೆ ಹಿಂತಿರುಗುವ ಸಂದರ್ಭ ಕಾರಿನಲ್ಲಿ ಒಮ್ಮೆಲೆ ಹೊಗೆ ಕಾಣಿಸಿಕೊಂಡಿತ್ತು. ಕೂಡಲೇ ಕಾರಿನಿಂದ ಇಳಿದ ಕಾರಣ ಕಾರಿನಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜಾಬಿರ್ ಪತ್ನಿ, ಮಗು ಹಾಗೂ ಸ್ನೇಹಿತನೊಂದಿಗೆ ಕಡಂಗಕ್ಕೆ ತೆರಳುತ್ತಿದ್ದರು. ಕಾರು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ.