*ಗೋಣಿಕೊಪ್ಪಲು, ಮಾ. ೨೬: ನಾವು ವಾಸಿಸುವ ಪ್ರದೇಶ ಹಸಿರಿನಿಂದ ಕಂಗೊಳಿಸಿದಾಗ ಉತ್ತಮ ಆರೋಗ್ಯ ಮತ್ತು ಮನಸ್ಸಿನ ಉಲ್ಲಾಸಕ್ಕೆ ಕಾರಣವಾಗುತ್ತದೆ. ಈ ಹಿನ್ನೆಲೆಯಲ್ಲಿ ನಾವು ನಮ್ಮ ಮನೆಯ ಸುತ್ತ ಗಿಡಗಳನ್ನು ನೆಡುವ ಮೂಲಕ ಪರಿಸರ ರಕ್ಷಣೆಗೆ ಮುಂದಾಗಬೇಕೆAದು ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಕಾವ್ಯ ರಾಣಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಪೊನ್ನಂಪೇಟೆ ತಾಲೂಕು ಕಚೇರಿ ಆವರಣದಲ್ಲಿ ಕಂದಾಯ ಇಲಾಖೆ, ತೋಟಗಾರಿಕೆ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಸಸಿ ನೆಡುವ ಮೂಲಕ ಮಾತನಾಡಿದ ಅವರು, ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡು ಆರೋಗ್ಯದಾಯಕ ವಾತಾವರಣವನ್ನು ಸೃಷ್ಟಿಸಲು ಗಿಡಗಳನ್ನು ಬೆಳೆಸಿ ಉಳಿಸುವುದರಿಂದ ಸಾಧ್ಯವಿದೆ. ಹುಟ್ಟು ಹಬ್ಬ ಆಚರಣೆಗಳ ಸಂದರ್ಭಗಳಲ್ಲಿ ಕೇಕ್ ಕತ್ತರಿಸುವ ಸಂಪ್ರದಾಯಗಳನ್ನು ಬಿಟ್ಟು ಕನಿಷ್ಟ ವರ್ಷಕ್ಕೊಂದು ಗಿಡ ನೆಡುವ ಆಚರಣೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.

ಕಚೇರಿಗಳ ಸುತ್ತಲಿನ ಆವರಣದಲ್ಲಿ ಹಸಿರು ನಳನಳಿಸುತ್ತಾ ಇದ್ದಾಗ ಯಾವುದೇ ಆಯಾಸವಿಲ್ಲದೇ ನಿತ್ಯದ ಕಾಯಕವನ್ನು ನಿಭಾಯಿಸಲು ಲವಲವಿಕೆಯ ಮನಸ್ಸನ್ನು ಹೊಂದಬಹುದಾಗಿದೆ. ಈ ಕಾರಣದಿಂದ ತಾಲೂಕು ಕಚೇರಿ ಆವರಣದಲ್ಲಿ ತೋಟಗಾರಿಕೆ ಇಲಾಖೆಯ ಸಹಕಾರದೊಂದಿಗೆ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.

ವೀರಾಜಪೇಟೆ ತಾಲೂಕು ತಹಶೀಲ್ದಾರ್ ಯೋಗಾನಂದ, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯ ನಿರ್ದೇಶಕಿ ಡೀನಾ, ಪೊನ್ನಂಪೇಟೆಯ ತಾಲೂಕು ಕಂದಾಯ ಪರಿವೀಕ್ಷಕ ರಾಧಕೃಷ್ಣ, ಕಚೇರಿ ಸಿಬ್ಬಂದಿಗಳು, ತೋಟಗಾರಿಕೆ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.