*ಗೋಣಿಕೊಪ್ಪ, ಮಾ. ೨೫: ಗೋಣಿಕೊಪ್ಪ ಮತ್ತು ಪೊನ್ನಂಪೇಟೆ ಅವಳಿ ಗ್ರಾಮಗಳ ಪಂಚಾಯಿತಿ ಚುನಾವಣೆಗೆ ಕುತೂಹಲಕರವಾದ ಬೆಳವಣಿಗೆ ಕಂಡಿದೆ.

ಇದೇ ತಿಂಗಳ ೨೯ರಂದು ನಡೆಯುವ ಚುನಾವಣೆಗೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಬೆಂಬಲಿತ ಕಾರ್ಯಕರ್ತರು ಹಾಗೂ ಸ್ವತಂತ್ರ ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ.

ಬಹುನಿರೀಕ್ಷಿತ ಮತ್ತು ಬದಲಾವಣೆಗೆ ಪಾತ್ರವಾಗಿರುವ ಗೋಣಿಕೊಪ್ಪಲು ಚುನಾವಣೆ ಕುತೂಹಲಕರ ಬೆಳವಣಿಗೆಯಾಗಿ ಕಾಡುತ್ತಿದೆ. ಕಳೆದ ಬಾರಿ ಗ್ರಾ.ಪಂ. ಆಡಳಿತದ ಚುಕ್ಕಾಣಿ ಹಿಡಿದಿದ್ದ ಸದಸ್ಯರುಗಳಲ್ಲಿ ಬಹುತೇಕ ಮಂದಿ ಈ ಬಾರಿಯ ಚುನಾವಣೆಯ ಕಣಕ್ಕಿಳಿದಿದ್ದಾರೆ. ಕಳೆದ ಬಾರಿಯ ಮತದಾರರ ನಿರೀಕ್ಷೆ ಮತ್ತು ಚುನಾವಣೆ ಸಂದರ್ಭ ನೀಡಿದ ಭರವಸೆಗಳನ್ನು ಹುಸಿಯಾದ ಕಾರಣ ಮತದಾರರು ಬದಲಾವಣೆಯನ್ನು ಬಯಸಿದ್ದಲ್ಲಿ ಹೊಸ ಮುಖಗಳಿಗೆ ಮತದಾರರು ಒಲಿಯಲಿದ್ದಾರೆ.

ಗೋಣಿಕೊಪ್ಪಲು ಗ್ರಾಮ ಪಂಚಾಯಿತಿಯ ಒಟ್ಟು ೨೧ ಸ್ಥಾನಗಳಿಗೆ ೮ ವಾರ್ಡ್ಗಳಲ್ಲಿ ೫೨ ಅಭ್ಯರ್ಥಿಗಳು ಸ್ಪರ್ಧೆಗಿಳಿದ್ದಿದ್ದಾರೆ. ಒಂದನೇ ವಿಭಾಗದಲ್ಲಿ ಮೂರು ಸ್ಥಾನಗಳಿಗೆ ಏಳು ಮಂದಿ, ಎರಡನೇ ವಿಭಾಗ ಎರಡು ಸ್ಥಾನಗಳಿಗೆ ನಾಲ್ಕು ಅಭ್ಯರ್ಥಿಗಳು, ಮೂರನೇ ವಿಭಾಗದ ಮೂರು ಸ್ಥಾನಗಳಿಗೆ ಹತ್ತು ಮಂದಿ, ನಾಲ್ಕನೇ ವಿಭಾಗದ ಮೂರು ಸ್ಥಾನಗಳಿಗೆ ಎಂಟು ಮಂದಿ, ಐದನೇ ವಿಭಾಗದ ಮೂರು ಸ್ಥಾನಗಳಿಗೆ ಆರು, ಆರನೇ ವಿಭಾಗದ ಮೂರು ಸ್ಥಾನಗಳಿಗೆ ಎಂಟು, ಏಳನೇ ವಿಭಾಗ ಎರಡು ಸ್ಥಾನಗಳಿಗೆ ನಾಲ್ಕು ಹಾಗೂ ಎಂಟನೇ ವಿಭಾಗದ ಎರಡು ಸ್ಥಾನಗಳಿಗೆ ಐದು ಅಭ್ಯರ್ಥಿಗಳು ಸ್ಪರ್ಧಾಕಣಕ್ಕೆ ಇಳಿದಿದ್ದು, ಮತದಾರರ ಓಲೈಕೆಗೆ ಸತಾಯಗತಾಯ ಪ್ರಯತ್ನ ನಡೆಸುತ್ತಿದ್ದಾರೆ.

-ಎನ್.ಎನ್. ದಿನೇಶ್