ಗೋಣಿಕೊಪ್ಪಲು, ಮಾ. ೨೫: ಮುಂಜಾನೆ ವಾಯು ವಿಹಾರಕ್ಕೆ ತೆರಳುವ ನೂರಾರು ಮಂದಿ ನಗರದ ಮುಖ್ಯ ರಸ್ತೆಯಲ್ಲಿ ವಾಕಿಂಗ್ ಮಾಡುವುದು ಸರ್ವೆ ಸಾಮಾನ್ಯವಾಗಿದೆ. ರಸ್ತೆಯಲ್ಲಿ ನೂರಾರು ಜನರ ಸಂಚಾರವಿದ್ದರೂ, ವಾಹನ ಓಡಾಟವಿದ್ದರೂ ಇವರ ಕಣ್ಣು ತಪ್ಪಿಸಿ ಹೊರರಾಜ್ಯದಿಂದ ತಂದ ರಾಶಿ ರಾಶಿ ತ್ಯಾಜ್ಯಗಳನ್ನು ರಸ್ತೆ ಬದಿಗೆ ಸುರಿದು ನಗರದ ನೈರ್ಮಲ್ಯವನ್ನು ಹಾಳುಮಾಡಿದ ಪ್ರಸಂಗ ಗೋಣಿಕೊಪ್ಪಲಿನಲ್ಲಿ ನಡೆದಿದೆ.ವಾಣಿಜ್ಯ ನಗರ ಗೋಣಿಕೊಪ್ಪದ ರಸ್ತೆ ಬದಿಯಲ್ಲಿ ಕೇರಳ ರಾಜ್ಯದ ಕೋಝಿಕೋಡ್ ಜಿಲ್ಲೆಯ ತ್ಯಾಜ್ಯ ವಸ್ತುಗಳನ್ನು ತಂದು ಅಕ್ರಮವಾಗಿ ಸುರಿಯುವ ಮೂಲಕ ನಗರದಲ್ಲಿ ಕಲುಷಿತ ವಾತಾವರಣ ನಿರ್ಮಾಣ ಮಾಡಲಾಗಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು ತೆರಳುವ ರಸ್ತೆ ಬದಿಯ ಫುಟ್‌ಪಾತ್‌ನಲ್ಲಿ ಕಸದ ರಾಶಿಗಳನ್ನು ಸುರಿದು ತೆರಳಿರುವುದರಿಂದ ಮುಂಜಾನೆ ವಿದ್ಯಾರ್ಥಿಗಳು ರಸ್ತೆ ಬದಿಯಲ್ಲಿ ಸಂಚರಿಸಲು ಇರಿಸು ಮುರಿಸು ಉಂಟಾಗಿತ್ತು. ಸುದ್ದಿ ತಿಳಿದ ಗೋಣಿಕೊಪ್ಪ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಚಂದ್ರಶೇಖರ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ತ್ಯಾಜ್ಯ ವಸ್ತುಗಳನ್ನು ತೆರವು ಗೊಳಿಸಿದರು.ಗುರುವಾರ ಮುಂಜಾನೆ ೫ ಗಂಟೆ ಸುಮಾರಿಗೆ ಕೇರಳ ರಾಜ್ಯದಿಂದ

(ಮೊದಲ ಪುಟದಿಂದ) ತ್ಯಾಜ್ಯ ತುಂಬಿದ ವಾಹನವು ರಸ್ತೆಯುದ್ದಕ್ಕೂ ತ್ಯಾಜ್ಯಗಳನ್ನು ಸುರಿಯುತ್ತ ತೆರಳಿದೆ. ಚೀಲಗಳಲ್ಲಿ ತುಂಬಿದ್ದ ವಾಸನೆ ಬೀರುವ ತ್ಯಾಜ್ಯಗಳನ್ನು ಮನಬಂದAತೆ ಸುರಿಯಲಾಗಿದೆ. ನಗರದ ಹೈಸ್ಕೂಲ್, ಕಾಲೇಜು, ಕೈಕೇರಿ ಹಾಗೂ ಇತರೆಡೆಯಲ್ಲಿ ಮುಂಜಾನೆ ಆರು ಗಂಟೆ ಸುಮಾರಿಗೆ ಈ ತ್ಯಾಜ್ಯಗಳನ್ನು ಸುರಿದು ಕಿಡಿಗೇಡಿಗಳು ತೆರಳಿದ್ದಾರೆ. ತ್ಯಾಜ್ಯದಿಂದ ದುರ್ಗಂಧ ಬೀರುತ್ತಿದ್ದು ದಾರಿ ಹೋಕರು ಮೂಗು ಮುಚ್ಚಿಕೊಂಡು ತೆರಳುವ ಸ್ಥಿತಿ ನಿರ್ಮಾಣವಾಗಿತ್ತು. -ಹೆಚ್.ಕೆ. ಜಗದೀಶ್