ಭಾಗಮಮಡಲ, ಮಾ. ೨೬ : ಕಳೆದ ಬಾರಿಯ ಮಳೆ ಗಾಲದಲ್ಲಿ ಅತಿವೃಷ್ಟಿ ಯಿಂದಾಗಿ ಪುಣ್ಯ ಕ್ಷೇತ್ರ ತಲಕಾವೇರಿಯಲ್ಲಿ ಗಜಗಿರಿ ಬೆಟ್ಟ ಕುಸಿದು ಸಾವು-ನೋವು ಸಂಭವಿಸಿದ ಘಟನೆ ಇನ್ನೂ ಹಸಿರಾಗಿರುವಾಗಲೇ ಮತ್ತೊಂದು ಮಳೆಗಾಲ ಸಮೀಪಿಸುತ್ತಲಿದೆ. ಗಜಗಿರಿಯಲ್ಲಿ ಕೊಚ್ಚಿಹೋಗಿದ್ದು ಬೆಟ್ಟ ಗುಡ್ಡ ಜನ-ಜಾನುವಾರುಗಳು ಮಾತ್ರವಲ್ಲ; ಕ್ಷೇತ್ರಕ್ಕೆ ನೀರನ್ನೊದಗಿಸುವ ಜಲ ಮೂಲ ಕೂಡ. ಇದೀಗ ಸುಡುಬಿಸಿಲು ಆರಂಭವಾಗಿದ್ದು, ನೀರಿನ ವ್ಯವಸ್ಥೆ ಮಾಡದಿದ್ದಲ್ಲಿ ಸಂಕಷ್ಟ ಎದುರಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಅಲ್ಲದೆ, ಬೆಟ್ಟದ ಮೇಲೆ ಅರಣ್ಯ ಇಲಾಖೆ ವತಿಯಿಂದ ನಿರ್ಮಿಸಲಾಗಿರುವ ಇಂಗುಗುAಡಿಗಳು ಅಪಾಯಕಾರಿಯಾಗಿದ್ದು, ಮಳೆಗಾಲದ ಒಳಗಡೆ ಅವುಗಳನ್ನು ಮುಚ್ಚದಿದ್ದಲ್ಲಿ ಅಪಾಯ ತಪ್ಪಿದ್ದಲ್ಲ..!ಕಳೆದ ಬಾರಿಯ ಮಳೆಗಾಲದಲ್ಲಿ ಅತಿವೃಷ್ಟಿಯಿಂದಾಗಿ ತಲಕಾವೇರಿ ಕ್ಷೇತ್ರದ ಗಜಗಿರಿ ಬೆಟ್ಟ ಕುಸಿದು ಬೆಟ್ಟದ ತಪ್ಪಲಿನಲ್ಲಿದ್ದ ಕ್ಷೇತ್ರದ ಪ್ರಧಾನ ಅರ್ಚಕ ನಾರಾಯಣಾಚಾರ್, ಪತ್ನಿ, ಸಹೋದರ ಹಾಗೂ ಇನ್ನಿಬ್ಬರು ಅರ್ಚಕರು ಸಾವನ್ನಪ್ಪಿದ್ದರು. ಜೊತೆಗೆ ಆಚಾರ್ ಅವರಿಗೆ ಸೇರಿದ ಜಾನುವಾರುಗಳು ಮೃತಪಟ್ಟಿದ್ದವು. ಇದರೊಂದಿಗೆ ತಲಕಾವೇರಿ ಕ್ಷೇತ್ರಕ್ಕೆ ನೀರು ಒದಗಿಸಲು ನಿರ್ಮಿಸಲಾಗಿದ್ದ ಕೊಳವೆ ಬಾವಿ ಕೂಡ ಕೊಚ್ಚಿಹೋಗಿದೆ. ತಲಕಾವೇರಿಯಲ್ಲಿ ಕುಂಡಿಕೆ, ಕೊಳ ಇದ್ದರೂ ಅಲ್ಲಿ ನಿತ್ಯ ಬಳಕೆಗಾಗಿ ಕೆಳಭಾಗದಿಂದ ನೀರು ಸರಬರಾಜು ಮಾಡಲಾಗುತ್ತಿತ್ತು. ನಾರಾಯಣಾಚಾರ್ ಮನೆಯ ಸಮೀಪದಲ್ಲೇ ಈ ಕೊಳವೆ ಬಾವಿ ಇದ್ದಿತು. ಅದಕ್ಕೆ ಮೋಟಾರ್ ಅಳವಡಿಸಿ ನೀರು ಸರಬರಾಜು ಮಾಡಲಾಗುತ್ತಿತ್ತು. ಶೌಚಾಲಯಕ್ಕೆ, ಕ್ಷೇತ್ರದ ಬಳಿ ಸ್ವಚ್ಛ ಮಾಡಲು, ಇನ್ನಿತರ ಬಳಕೆಗಾಗಿ ಈ ನೀರು ಬಳಕೆಯಾಗುತ್ತಿತ್ತು. ಇದೀಗ ಬೆಟ್ಟದೊಂದಿಗೆ ನೀರಿನ ಮೂಲವೂ ಕೊಚ್ಚಿಹೋಗಿದೆ. ಸದ್ಯಕ್ಕೆ ಕ್ಷೇತ್ರದ ಬಳಿಯಿರುವ ಈ ಹಿಂದೆ ಬಳಸಲಾಗುತ್ತಿದ್ದ ಹಳೆಯ ಬಾವಿಯಿಂದ ನೀರು ಬಳಸಿಕೊಳ್ಳಲಾಗುತ್ತಿದೆ. ಅದರಲ್ಲೂ ಕೂಡ ನೀರಿನ ಮಟ್ಟ ಇಳಿಕೆ ಕಾಣುತ್ತಿದ್ದು, ಶೀಘ್ರವೇ ಬದಲೀ ನೀರಿನ ವ್ಯವಸ್ಥೆ ಮಾಡದಿದ್ದರೆ ಸಂಕಷ್ಟ ಎದುರಾಗಬಹುದು.

೪೦೦ ಗುಂಡಿಗಳು

ಘಟನೆಗೆ ಕಾರಣ ಕಂಡುಹಿಡಿಯಲು ಜಿಲ್ಲೆಗೆ ಆಗಮಿಸಿದ್ದ ತಜ್ಞರ ಸಮಿತಿ; ಬೆಟ್ಟದ ಮೇಲೆ ಅವೈಜ್ಞಾನಿಕವಾಗಿ ಇಂಗುಗುAಡಿಗಳನ್ನು ನಿರ್ಮಿಸಿರುವದರಿಂದ ಬೆಟ್ಟ ಕುಸಿತಕ್ಕೆ ಕಾರಣವಾಗಿದೆ ಎಂದು ವರದಿ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಇಂಗುಗುAಡಿಗಳನ್ನು ಮುಚ್ಚುವಂತೆ ಅಂದಿನ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅರಣ್ಯ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದ್ದರು.

(ಮೊದಲ ಪುಟದಿಂದ) ಆದರೆ, ಇದುವರೆಗೆ ಗುಂಡಿ ಮುಚ್ಚುವ ಕಾಯಕಕ್ಕೆ ಚಾಲನೆ ಸಿಕ್ಕಿಲ್ಲ.

ತಲಕಾವೇರಿಯ ಗಜಗಿರಿ ಬೆಟ್ಟದಲ್ಲಿ ಅಂದಾಜು ೪೦೦ರಷ್ಟು ಇಂಗುಗುAಡಿಗಳಿವೆ. ೨೦೧೪-೧೫ರಲ್ಲಿ ಈ ಗುಂಡಿಗಳನ್ನು ನಿರ್ಮಿಸಲಾಗಿದೆ. ಬೆಟ್ಟದ ಮೇಲಿರುವ ಗಿಡ, ಮರಗಳಿಗೆ ನೀರು ಒದಗಿಸುವ ಸಲುವಾಗಿ ಗುಂಡಿಗಳನ್ನು ನಿರ್ಮಿಸಲಾಗಿದೆಯಾದರೂ ಅವೈಜ್ಞಾನಿಕವಾಗಿ ನಿರ್ಮಿಸಿರುವದರಿಂದ ದುರ್ಘಟನೆ ಸಂಭವಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಒಂದೊAದು ಗುಂಡಿಗಳು ಸುಮಾರು ಐದು ಮೀಟರ್ ಉದ್ದ ಹಾಗೂ ಒಂದು ಮೀಟರ್‌ನಷ್ಟು ಆಳವಿದೆ. ಅಂದರೆ ಸಾಮಾನ್ಯ ಗುಂಡಿಗಿAತ ದುಪ್ಪಟ್ಟು ಅಳತೆಯದ್ದಾಗಿದೆ. ಅಲ್ಲದೆ ಬೆಟ್ಟದ ಮೇಲೆ ಹಿಟಾಚಿ ಯಂತ್ರ ಬಳಸಿ ಗುಂಡಿಗಳನ್ನು ನಿರ್ಮಿಸಿರುವದರಿಂದ ಬೆಟ್ಟ ಕುಸಿಯಲು ಕಾರಣವೆನ್ನಲಾಗಿದೆ.

ಅನುಮತಿಗಾಗಿ ಕಾಯುತ್ತಿರುವ ಇಲಾಖೆ

ತಜ್ಞರ ವರದಿ ಬಂದ ಬಳಿಕ ಸಭೆ ನಡೆಸಿದ ಜಿಲ್ಲಾಧಿಕಾರಿಗಳು ಇಂಗುಗುAಡಿಗಳನ್ನು ಮುಚ್ಚುವಂತೆ ಅರಣ್ಯ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದ್ದರು. ಈ ಸಂಬAಧ ಅಧಿಕಾರಿಗಳು ಗುಂಡಿ ಮುಚ್ಚಲು ಅನುಮತಿ ಕೋರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಆದರೆ ಇನ್ನೂ ಕೂಡ ಹಿರಿಯ ಅಧಿಕಾರಿಗಳಿಂದ ಗುಂಡಿ ಮುಚ್ಚಲು ಅನುಮತಿ ಸಿಕ್ಕಿಲ್ಲ. ಅನುಮತಿ ಸಿಕ್ಕ ಬಳಿಕ ಎಲ್ಲ ೪೦೦ ಗುಂಡಿಗಳನ್ನು ಮುಚ್ಚಲು ಇಲಾಖೆ ತಯಾರಿ ಮಾಡಿಕೊಂಡಿದೆ. ಬೆಟ್ಟದ ಮೇಲೆ ಗುಂಡಿ ತೆಗೆಯಲಾಗಿರುವ ಮಣ್ನನ್ನೇ ಬಳಸಿ ಮುಚ್ಚಲಾಗುವದು. ಸ್ಥಳೀಯ ಜನರನ್ನು ಬಳಸಿಕೊಂಡು, ಅಗತ್ಯವಿದ್ದಲ್ಲಿ ಹೊರಗಡೆಯಿಂದಲೂ ಜನರನ್ನು ಕರೆಸಿಕೊಂಡು ಮುಚ್ಚುವದು. ಗುಂಡಿ ಮುಚ್ಚಿ ಒಂದೆರಡು ಮಳೆಯಾದ ಬಳಿಕ ಜಗ್ಗಿದ ಜಾಗಗಳಿಗೆ ಮತ್ತೆ ಮಣ್ಣು ಸುರಿದು ಮುಚ್ಚಿ, ವೆಟ್ರಿವೇಲ್ ಹುಲ್ಲು ನೆಡಲು ಇಲಾಖೆ ಕ್ರಮ ಕೈಗೊಂಡಿದೆ. ಆದರೆ ಮೇಲಧಿಕಾರಿಗಳಿಂದ ಅನುಮತಿ ದೊರಬೇಕಷ್ಟೆ. ಮಳೆಗಾಲ ಆರಂಭವಾಗುವ ಮುನ್ನ ಈ ಕೆಲಸವಾಗದಿದ್ದಲ್ಲಿ ಅಪಾಯ ಸಂಭವಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

- ಸಂತೋಷ್, ಸುನಿಲ್