ಮಡಿಕೇರಿ, ಮಾ. ೨೨: ಮಡಿಕೇರಿ ನಗರದ ಹೊರವಲಯದಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ವೃದ್ಧೆ ಮಹಿಳೆಯನ್ನು ಹತ್ಯೆಗೈದು ನಗದು, ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಯೊಂದಿಗೆ ಮಂಗಳೂರಿಗೆ ತೆರಳಿರುವ ಪೊಲೀಸರ ತಂಡ ಕಳವು ಮಾಡಲಾದ ವಸ್ತುಗಳನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ತನಿಖೆ ಮುಂದುವರಿಸಿರುವದಾಗಿ ತಿಳಿದು ಬಂದಿದೆ.ಮಡಿಕೇರಿ ಹೊರವಲಯದ ಕೆ.ನಿಡುಗಣೆ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಮಹೀಂದ್ರ ರೆಸಾರ್ಟ್ ಬಳಿ ನೆಲೆಸಿದ್ದ ವೃದ್ಧೆ ಮಹಿಳೆ ಬೈಲಾಡಿ ಲಲಿತಾ (೭೦) ಎಂಬವರನ್ನು ಕಳೆದ ಫೆಬ್ರವರಿ ೨೩ರಂದು ಕತ್ತಿಯಿಂದ ಕಡಿದು ರಾತ್ರಿ ಹತ್ಯೆ ಮಾಡಿ ಮನೆಯಲ್ಲಿದ್ದ ಅಂದಾಜು ರೂ. ೫೦ ಸಾವಿರ ನಗದು ಸೇರಿದಂತೆ ೧೫ ಪವನ್‌ನಷ್ಟು ಚಿನ್ನಾಭರಣಗಳನ್ನು ಅಪಹರಿಸಲಾಗಿತ್ತು.(ಮೊದಲ ಪುಟದಿಂದ) ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಆರೋಪಿಗಳ ಸುಳಿವಿರಲಿಲ್ಲ. ಆರೋಪಿಗಳನ್ನು ಪತ್ತೆಹಚ್ಚುವ ಸಲುವಾಗಿ ಕೊಡಗು ಜಿಲ್ಲಾ ಅಪರಾಧ ಪತ್ತೆದಳಕ್ಕೆ ಪ್ರಕರಣವನ್ನು ವಹಿಸಲಾಗಿದ್ದು, ತನಿಖೆ ಮುಂದುವರಿಸಿದ ಪತ್ತೆದಳದವರು ಇದೀಗ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಮೂಲತಃ ಮಂಗಳೂರಿನ ನಿವಾಸಿ ಗಾಳಿಬೀಡು ಸಮೀಪದ ರೆಸಾರ್ಟ್ನಲ್ಲಿ ಕೆಲಸಮಾಡಿಕೊಂಡಿದ್ದ ಯುವಕನನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿ ಕಳವು ಮಾಡಿದ್ದ ಚಿನ್ನಾಭರಣಗಳನ್ನು ಮಂಗಳೂರಿನ ಬೇರೆ ಬೇರೆ ಕಡೆಗಳಲ್ಲಿ ಮಾರಾಟ ಮಾಡಿದ್ದು, ಅವುಗಳನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಮಂಗಳೂರಿನಲ್ಲಿಯೇ ತನಿಖೆ ಮುಂದುವರಿಸಿದ್ದಾರೆ.

ಪರಿಚಯ ಮಾಡಿಕೊಂಡಿದ್ದ..!

ಹತ್ಯೆಗೀಡಾದ ಕೆ.ನಿಡುಗಣೆಯ ನಿವಾಸಿ ದಿ. ಬೈಲಾಡಿ ಹೊನ್ನಪ್ಪ ಅವರ ಪತ್ನಿ ಲಲಿತಾ ಕಳೆದ ಹಲವು ವರ್ಷಗಳಿಂದ ತಮ್ಮ ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದು, ತೋಟದ ಉಸ್ತುವಾರಿ ನೋಡಿಕೊಂಡಿದ್ದರು. ಇವರ ಪುತ್ರ ಮೈಸೂರಿನಲ್ಲಿ ಉದ್ಯೊಗದಲ್ಲಿದ್ದು, ಓರ್ವ ಪುತ್ರಿ ಬೆಂಗಳೂರಿನಲ್ಲಿ, ಮತ್ತೋರ್ವ ಪುತ್ರಿ ಕಲ್ಲುಗುಂಡಿಯಲ್ಲಿ ವಾಸವಿದ್ದಾರೆ. ಇತ್ತ ಹೊರಗುತ್ತಿಗೆ ಆಧಾರದಲ್ಲಿ ರೆಸಾರ್ಟ್ನಲ್ಲಿ ಕೆಲಸ ಮಾಡಿಕೊಂಡಿದ್ದ ಯುವಕ ರೆಸಾರ್ಟ್ಗೆ ಬರುವ ಅತಿಥಿಗಳನ್ನು ವಾಹನಗಳಲ್ಲಿ ಸುತ್ತಾಡಿಸಿಕೊಂಡು ಬರುವಾಗ ಈ ಮಹಿಳೆಯ ಮನೆಯ ಸಮೀಪದಲ್ಲೆಲ್ಲ ಹೋಗುತ್ತಿದ್ದನಂತೆ. ಹಾಗೇ ಹೋಗುತ್ತಾ ಮಹಿಳೆಯ ಪರಿಚಯ ಮಾಡಿಕೊಂಡಿದ್ದಾನೆ. ಮಾತುಕತೆ ಆಡಿಕೊಂಡು ಮಹಿಳೆ ಒಂಟಿಯಾಗಿರುವದು ಸೇರಿದಂತೆ ಪೂರ್ವಾಪರ ಹಾಗೂ ಹಣ, ಚಿನ್ನಾಭರಣಗಳಿರುವ ಬಗ್ಗೆ ತಿಳಿದುಕೊಂಡಿದ್ದಾನೆ. ನಂತರದಲ್ಲಿ ಸಮಯ ಸಾಧಿಸಿ ಕಳ್ಳತನ ಮಾಡಿದ್ದಾನೆ. ಈ ಸಂದರ್ಭದಲ್ಲಿ ಎದುರುಗೊಂಡ ಲಲಿತಾ ಅವರನ್ನು ಕತ್ತಿಯಿಂದ ಕಡಿದು ಹತ್ಯೆ ಮಾಡಿ ಪರಾರಿಯಾಗಿದ್ದಾನೆ.

ಹಂತಕನ ಜಾಡು ಹಿಡಿದು ಬೆನ್ನತ್ತಿದ್ದ ಪೊಲೀಸರು ಆತನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.