*ಸಿದ್ದಾಪುರ, ಮಾ. ೨೦: ಕತ್ತಲೆಕಾಡು-ಅಬ್ಯಾಲ ರಸ್ತೆ ಸುಮಾರು ರೂ. ೧೨ ಕೋಟಿ ವೆಚ್ಚದಲ್ಲಿ ಕಾಂಕ್ರಿಟೀಕರಣಗೊಳ್ಳುತ್ತಿದೆ. ಸೋಮವಾರಪೇಟೆ ತಾ.ಪಂ. ಸದಸ್ಯ ಬಲ್ಲಾರಂಡ ಮಣಿಉತ್ತಪ್ಪ ಅವರು ಇಂದು ಕತ್ತಲೆಕಾಡಿನಲ್ಲಿ ಕಾಮಗಾರಿಗೆ ಚಾಲನೆ ನೀಡಿದರು.

ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಅತಿಯಾದ ಮಳೆ, ಕೊಲ್ಲಿ ನೀರು ಹರಿವು ಮತ್ತು ಕೇಬಲ್ ಅಳವಡಿಕೆಯಿಂದ ಪ್ರತಿವರ್ಷ ರಸ್ತೆ ಕುಸಿದು ಹಾನಿಗೀಡಾಗುತ್ತಿತ್ತು. ಇದರಿಂದ ಜನರು ಹಾಗೂ ವಾಹನಗಳ ಸಂಚಾರಕ್ಕೆ ಅಡಚಣೆಯಾಗುತ್ತಿತ್ತು. ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಕಾಂಕ್ರಿಟ್ ರಸ್ತೆ ನಿರ್ಮಿಸಲಾಗುತ್ತಿದೆ ಎಂದರು.

ಶಾಸಕರು ಭೂಮಿಪೂಜೆ ನೆರವೇರಿಸಬೇಕಾಗಿತ್ತಾದರೂ ಅಧಿವೇಶನ ನಡೆಯುತ್ತಿರುವುದರಿಂದ ನಾನೇ ಕಾಮಗಾರಿಗೆ ಚಾಲನೆ ನೀಡಿದ್ದೇನೆ. ಸುಮಾರು ೭ ಕಿ.ಮೀ. ದೂರದ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಮಣಿ ಉತ್ತಪ್ಪ ಅವರು ಗುತ್ತಿಗೆದಾರರಿಗೆ ತಿಳಿಸಿದರು.

ಅಭಿಯಂತರ ಪೀಟರ್, ಪ್ರಮುಖರಾದ ಕಣಂಜಾಲು ಕಿಶೋರ್, ಕುಡೆಕಲ್ ಸಂಪತ್ ಮತ್ತಿತರರು ಈ ಸಂದರ್ಭ ಹಾಜರಿದ್ದರು.