ಸೋಮವಾರಪೇಟೆ, ಮಾ. ೨೦: ಪಟ್ಟಣದ ಕಕ್ಕೆಹೊಳೆ ಜಂಕ್ಷನ್ ಸಮೀಪದಲ್ಲಿರುವ ಶ್ರೀ ಮುತ್ತಪ್ಪಸ್ವಾಮಿ ಮತ್ತು ಅಯ್ಯಪ್ಪಸ್ವಾಮಿ ದೇವಾಲಯದ ವರ್ಷಾವಧಿ ಜಾತ್ರೋತ್ಸವವು ಶ್ರದ್ಧಾಭಕ್ತಿಯಿಂದ ನೆರವೇರಿತು.
ದೇವಾಲಯದಲ್ಲಿ ಗಣಪತಿ ಹೋಮ ನಡೆಸಿ, ಧ್ವಜಾರೋಹಣ ಮಾಡುವ ಮೂಲಕ ಜಾತ್ರೋತ್ಸವಕ್ಕೆ ಚಾಲನೆ ನೀಡಲಾಯಿತು. ಮುತ್ತಪ್ಪ-ತಿರುವಪ್ಪ ದೈವಗಳಿಗೆ ಪಯಂಗುತ್ತಿ ಸೇವೆ ಸಲ್ಲಿಸಿ, ಮೊದಲ್ ಕಳಸ ಹಾಗೂ ಆಗಮನ ಕಳಸಗಳನ್ನು ದೇವಾಲಯಕ್ಕೆ ಪ್ರದಕ್ಷಿಣೆಯ ಮೂಲಕ ಕರೆತರಲಾಯಿತು.
ದೇವಾಲಯದಲ್ಲಿ ಮುತ್ತಪ್ಪ, ತಿರುವಪ್ಪ, ವಿಷ್ಣುಮೂರ್ತಿ, ಭಗವತಿ, ರಕ್ತಚಾಮುಂಡಿ, ಕಂಡಕರ್ಣ, ಕರಿಂಗುಟ್ಟಿ ಶಾಸ್ತಾವು, ಪೊಟ್ಟನ್ ಹಾಗೂ ಗುಳಿಗ ದೈವಗಳ ವೆಳ್ಳಾಟಂ, ದೇವರ ಕಳಿಕ್ಕಾಪಾಟ್ ನಡೆಯಿತು. ಜಾತ್ರೋತ್ಸವದ ಅಂಗವಾಗಿ ಶ್ರೀ ಅಯ್ಯಪ್ಪಸ್ವಾಮಿ, ಭುವನೇಶ್ವರಿ, ಗಣಪತಿ ಹಾಗೂ ನಾಗದೈವಗಳಿಗೆ ವಿಶೇಷ ಪೂಜೆಗಳು ನೆರವೇರಿದವು.
ದೈವಗಳ ಕೋಲಗಳು, ಗುರು ಶ್ರೀದರ್ಪಣ, ಪೊಟ್ಟನ್ ದೈವ ಅಗ್ನಿ ಮೇಲೇರುವುದು, ಅಗ್ನಿಕಂಡಕರ್ಣ ದೇವಾಲಯ ಪ್ರದಕ್ಷಿಣೆ ಸೇರಿದಂತೆ ಪೂಜಾ ವಿಧಿವಿಧಾನಗಳು ನಡೆದವು. ನಂತರ ಗುಳಿಗ, ವಿಷ್ಣುಮೂರ್ತಿ ದೈವಗಳ ಕೋಲ, ಅನ್ನಸಂತರ್ಪಣೆ ಯೊಂದಿಗೆ ಜಾತ್ರೋತ್ಸವ ಸಂಪನ್ನಗೊAಡಿತು. ವಿಶೇಷವಾಗಿ ದೇವಾಲಯದ ಆಡಳಿತ ಮಂಡಳಿ ಸದಸ್ಯರುಗಳು, ಚಂಡೆ ಹಾಗೂ ಕೋಲ ಕ್ಕಾರರು ಕೋವಿಡ್ ಪರೀಕ್ಷೆಗೊಳಪಡಿ ಸಿಕೊಂಡು ಪೂಜಾ ವಿಧಿವಿಧಾನದಲ್ಲಿ ಪಾಲ್ಗೊಂಡಿದ್ದರೆ, ದೇವಾಲಯಕ್ಕೆ ಆಗಮಿಸುತ್ತಿದ್ದ ಭಕ್ತರಿಗೆ ಸ್ಯಾನಿಟೈಸರ್ ನೀಡಿ, ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿತ್ತು.
ಈ ಸಂದರ್ಭ ಮಾಸ್ಕ್ ರಹಿತವಾಗಿ ಬಂದಿದ್ದ ಭಕ್ತರಿಗೆ ದೇವಾಲಯ ವತಿಯಿಂದ ಮಾಸ್ಕನ್ನು ವಿತರಿಸುವ ಮೂಲಕ ಕೋವಿಡ್-೧೯ರ ನಿಯಮ ಗಳನ್ನು ಪಾಲಿಸುವ ಬಗ್ಗೆ ಜಾಗೃತಿ ಮೂಡಿಸಲಾಯಿತು. ಜಾತ್ರೋತ್ಸವದ ಯಶಸ್ಸಿಗಾಗಿ ದೇವಾಲಯ ಸಮಿತಿ ಅಧ್ಯಕ್ಷ ಎನ್.ಡಿ. ವಿನೋದ್, ಪ್ರಧಾನ ಕಾರ್ಯದರ್ಶಿ ಎನ್.ಟಿ. ಪ್ರಸನ್ನ ನಾಯರ್ ಸೇರಿದಂತೆ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಶ್ರಮಿಸಿದರು.
ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಪ್ರದಾನ ಅರ್ಚಕ ಮಣಿಕಂಠನ್ ನಂಬೂದರಿ ಹಾಗೂ ಮುತ್ತಪ್ಪಸ್ವಾಮಿ ದೇವಾಲಯದಲ್ಲಿ ಕೆ.ಬಿ. ಸುದೀಶ್ ಹಾಗೂ ಸನಿಲ್ ಮಡಯನ್ ಪೂಜಾ ವಿಧಿವಿಧಾನಗಳನ್ನು ನಡೆಸಿಕೊಟ್ಟರು.