ಮಡಿಕೇರಿ, ಮಾ. ೨೦: ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ಹೆಸರು ನೋಂದಾಯಿಸಿದವರಿಗೆ ಹಂತ ಹಂತವಾಗಿ ವೃತ್ತಿ ಕೌಶಲ್ಯ ತರಬೇತಿ ನೀಡುವಲ್ಲಿ ಅಗತ್ಯ ಕ್ರಮವಹಿಸುವಂತೆ ಕೌಶಲ್ಯಾಭಿವೃದ್ಧಿ ಇಲಾಖೆ ಅಧಿಕಾರಿಗೆ ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರು ನಿರ್ದೇಶನ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಪ್ರಧಾನಮಂತ್ರಿ ಕೌಶಲ್ಯ ವಿಕಾಸ್ ಯೋಜನೆ ಮತ್ತು ಮುಖ್ಯಮಂತ್ರಿ ಕೌಶಲ್ಯ ಕರ್ನಾಟಕ ಯೋಜನೆ ಅನುಷ್ಠಾನ ಕುರಿತು ಮಾಹಿತಿ ಪಡೆದು ಅವರು ಮಾತನಾಡಿದರು.
ಅರ್ಹರಿಗೆ ಉದ್ಯೋಗ ಕಲ್ಪಿಸುವುದರ ಜೊತೆಗೆ ಸ್ವ ಸಹಾಯ ಸಂಘಗಳಿಗೆ ವಿವಿಧ ವೃತ್ತಿಪರ ತರಬೇತಿ ನೀಡಬೇಕು. ಟೈಲರಿಂಗ್, ಎಂಬ್ರಾಯಿಡರಿAಗ್, ಮೊಬೈಲ್ ರಿಪೇರಿ, ವಾಹನ ರಿಪೇರಿ, ಗೃಹ ಉಪಯೋಗಿ ವಸ್ತುಗಳ ತಯಾರಿಕೆ ಹೀಗೆ ಹಲವು ವೃತ್ತಿಪರ ತರಬೇತಿ ನೀಡುವಂತೆ ಅವರು ನಿರ್ದೇಶನ ನೀಡಿದರು.
ಕೌಶಲ್ಯ ಮಿಷನ್ ಯೋಜನೆ ಯನ್ನು ಸಮರ್ಪಕವಾಗಿ ಅನುಷ್ಠಾನ ಗೊಳಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಕೌಶಲ್ಯ ಮಿಷನ್ ಉಪಸಮಿತಿ ಸಭೆಯನ್ನು ತಮ್ಮ ಹಂತದಲ್ಲಿಯೇ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಅವರು ಸ್ಪಷ್ಟ ನಿರ್ದೇಶನ ನೀಡಿದರು.
ಜಿಲ್ಲಾ ಉದ್ಯೋಗ ವಿನಿಮಯಾಧಿಕಾರಿ ಉಮಾ ಅವರು ಮಾಹಿತಿ ನೀಡಿ ಜಿಲ್ಲೆಯಲ್ಲಿ ೮ ಸಾವಿರ ಮಂದಿ ವಿವಿಧ ವೃತ್ತಿ ತರಬೇತಿಗೆ ನೋಂದಣಿಯಾಗಿದ್ದಾರೆ, ಪ್ರಸಕ್ತ ವರ್ಷದಲ್ಲಿ ೧೪೫ ಮಂದಿಗೆ ವೃತ್ತಿ ತರಬೇತಿ ನೀಡಲು ಗುರಿ ಇದೆ ಎಂದು ಅವರು ಮಾಹಿತಿ ನೀಡಿದರು.
ವೀರಾಜಪೇಟೆಯಲ್ಲಿ ಪ್ರಧಾನಮಂತ್ರಿ ಕೌಶಲ್ಯ ವಿಕಾಸ್ ಯೋಜನೆಯ ತರಬೇತಿ ಕೇಂದ್ರ ಇದ್ದು, ಇಲ್ಲಿ ವೃತ್ತಿ ಕೌಶಲ್ಯ ತರಬೇತಿ ನೀಡಲಾಗುತ್ತದೆ. ಪ್ರಧಾನಮಂತ್ರಿ ಕೌಶಲ್ಯ ವಿಕಾಸ್ ಯೋಜನೆ ಹಾಗೂ ಮುಖ್ಯಮಂತ್ರಿಯವರ ಕೌಶಲ್ಯ ಕರ್ನಾಟಕ ಯೋಜನೆಯಡಿ ವಿವಿಧ ಸಂಸ್ಥೆಗಳ ಮೂಲಕ ತರಬೇತಿ ನೀಡಲಾಗುತ್ತದೆ ಎಂದರು.
ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ರಾಜು ಅವರು ಮಾಹಿತಿ ನೀಡಿ ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ಮಂಜೂರಾತಿ ಜಾರಿಯಲ್ಲಿದೆ. ಬೀದಿ ಬದಿ ವ್ಯಾಪಾರಿಗಳ ಜೀವನೋಪಾಯ ಸುಧಾರಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮ ನಿರ್ಭರ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.
ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಆರ್.ಕೆ. ಬಾಲಚಂದ್ರ ಅವರು ಮಾಹಿತಿ ನೀಡಿ ಜಿಲ್ಲೆಯಲ್ಲಿ ೧೮,೪೦೦ ಸ್ವ ಸಹಾಯ ಗುಂಪುಗಳು ಬ್ಯಾಂಕ್ನಲ್ಲಿ ನೋಂದಣಿಯಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಟಾಟಾ ಟೆಕ್ನಾಲಜಿಸ್ ಸಹಯೋಗದಲ್ಲಿ ಸರ್ಕಾರ ಕೈಗಾರಿಕಾ ಸಂಸ್ಥೆಗಳ ಉನ್ನತ್ತೀಕರಿಸುವುದು, ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ಸೌಲಭ್ಯ ಕಲ್ಪಿಸುವುದು, ಜಿಲ್ಲಾ ಕೌಶಲ್ಯ ಮಿಷನ್ ಉಪ ಸಮಿತಿ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು.
ಕೂಡಿಗೆಯ ಕಾಬ್ಸೆಟ್ ಸಂಸ್ಥೆಯ ನಿರ್ದೇಶಕರಾದ ಸುರೇಶ್ ಅವರು ವಿವಿಧ ವೃತ್ತಿಪರ ತರಬೇತಿ ಬಗ್ಗೆ ಮಾಹಿತಿ ನೀಡಿದರು.
ಐಟಿಡಿಪಿ ಇಲಾಖಾ ಅಧಿಕಾರಿ ಶಿವಕುಮಾರ್, ಜಿ.ಪಂ. ಯೋಜನಾ ನಿರ್ದೇಶಕರಾದ ರಾಜ್ ಗೋಪಾಲ್, ಜಿ.ಪಂ. ಉಪ ಕಾರ್ಯದರ್ಶಿ ಶ್ರೀಕಂಠಮೂರ್ತಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಶಬಾನಾ ಎಂ.ಶೇಖ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಮಚ್ಚಾಡೋ, ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರಾದ ಸುರೇಶ್ ಭಟ್, ಇತರರು ಇದ್ದರು.