ಸೋಮವಾರಪೇಟೆ, ಮಾ. ೨೦: ದಲಿತ ದೌರ್ಜನ್ಯ ಕಾಯ್ದೆಯಡಿ ತಾಲೂಕಿನ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯೊಬ್ಬರ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸಲಾಗಿದ್ದು, ಕಾಯ್ದೆಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಕೃಷ್ಣಪ್ಪ ಸ್ಥಾಪಿತ)ಯ ಪದಾಧಿಕಾರಿಗಳು ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಡಿ.ಜೆ. ಈರಪ್ಪ, ಕಳೆದ ತಾ. ೪ ರಂದು ಕೊಡ್ಲಿಪೇಟೆಯ ತೇಜಕುಮಾರ್ ಎಂಬವರು ಊರುಗುತ್ತಿ ಗ್ರಾಮದ ಯು.ಸಿ. ಪರಮೇಶ್ ಎಂಬವರ ಮೇಲೆ ದೌರ್ಜನ್ಯ ನಡೆಸಿರುವದಾಗಿ ಆರೋಪಿಸಿ, ತಾ. ೯ ರಂದು ಸುಳ್ಳು ದೂರು ನೀಡಿದ್ದಾರೆ. ವೈಯುಕ್ತಿಕ ದ್ವೇಷ ಸಾಧನೆಗೆ ಕೆಲವರು ಪರಮೇಶ್ ಅವರನ್ನು ಬಳಸಿಕೊಂಡಿದ್ದು, ಈ ಬಗ್ಗೆ ಪೊಲೀಸರು ಕೂಲಂಕುಷವಾಗಿ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.

ತೇಜಕುಮಾರ್ ಅವರ ಸಮುದಾಯದ ಕೆಲವರು ರಾಜಕೀಯ ಮತ್ತು ವ್ಯಾವಹಾರಿಕ ದ್ವೇಷದಿಂದ ಪರಿಶಿಷ್ಟ ಜಾತಿಯ ವ್ಯಕ್ತಿಯನ್ನು ಬಳಸಿಕೊಂಡು ಪರಿಶಿಷ್ಟ ಜಾತಿ ಮತ್ತು ಪಂಗಡದ ದೌರ್ಜನ್ಯ ಪ್ರತಿಬಂಧಕ ಕಾಯ್ದೆಯನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಈರಪ್ಪ ಆಗ್ರಹಿಸಿದರು.

ಗೋಷ್ಠಿಯಲ್ಲಿ ಸಮಿತಿಯ ತಾಲೂಕು ಸಂಚಾಲಕ ಎಂ.ಎಸ್. ಕುಮಾರ್, ಸದಸ್ಯರಾದ ಎಸ್.ವಿ. ನಿತ್ಯಾನಂದ, ಡಿ.ಈ. ಶಿವಣ್ಣ, ಡಿ.ಈ. ಸುರೇಶ್ ಅವರುಗಳು ಉಪಸ್ಥಿತರಿದ್ದರು.