ಕ್ರಮಕ್ಕೆ ಒತ್ತಾಯ
ಕಣಿವೆ, ಮಾ. ೧೫: ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಸಮರ್ಪಕವಾದ ಕಸ ವಿಲೇವಾರಿ ಮಾಡುವಲ್ಲಿ ನಿರ್ಲಕ್ಷ್ಯ ಧೋರಣೆ ತಾಳಿದೆ ಎಂದು ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸರ್ಕಾರಿ ಪದವಿ ಕಾಲೇಜು ರಸ್ತೆ, ಮುಳ್ಳುಸೋಗೆ ಗ್ರಾಮದ ಸರ್ಕಾರಿ ಶಾಲೆಯಲ್ಲಿರುವ ಕಾವೇರಿ ಹೊಳೆ ರಸ್ತೆ, ಗುಮ್ಮನಕೊಲ್ಲಿಯ ಸರ್ಕಾರಿ ಶಾಲೆ ಮುಂಬದಿಯಲ್ಲಿನ ಮುಖ್ಯ ರಸ್ತೆಯಂಚು ಸೇರಿದಂತೆ ಎಲ್ಲೆಡೆಗಳಲ್ಲಿ ಕಸದ ರಾಶಿ ತುಂಬಿದೆ.
ಕೆಲವು ಬಡಾವಣೆಗಳ ನಿವಾಸಿಗಳು ತಮ್ಮ ಮನೆಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದ ರಾಶಿಯನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿ ರಸ್ತೆ ಬದಿಯಲ್ಲಿ ಬಿಸಾಕುತ್ತಿರುವುದರಿಂದ ಬೀದಿ ಶ್ವಾನಗಳು ಆ ಕೊಳಕು ಬೀರುವ ಕಸದ ಚೀಲಗಳನ್ನು ಎಳೆದಾಡಿ ಹೊತ್ತೊಯ್ಯುವಾಗ ಇಡೀ ಪರಿಸರ ಕಸಮಯವಾಗುತ್ತಿದೆ. ಆದ್ದರಿಂದ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು, ಸರ್ಕಾರಿ ಶಾಲೆಯ ಮಕ್ಕಳು, ಹಾಗೂ ಸಾರ್ವಜನಿಕರು ಸೂಕ್ತ ರೀತಿಯಲ್ಲಿ ಕಸ ತ್ಯಾಜ್ಯ ನಿರ್ವಹಿಸದ ಪಂಚಾಯಿತಿ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಮೂರು ತಿಂಗಳ ಹಿಂದಷ್ಟೇ ಇದೇ ಮುಳ್ಳುಸೋಗೆ ಗ್ರಾಮ ಪಂಚಾಯಿತಿಗೆ ಕೊಡಗು ಜಿಲ್ಲಾ ಪಂಚಾಯಿತಿಯಿAದ ಸ್ವಚ್ಛತೆಯ ಕಾರಣಕ್ಕೆ ರೂ. ೨೦ ಲಕ್ಷ ಹಣ ನೀಡಿತ್ತು. ಆ ಹಣದಿಂದ ಇದೇ ಕಾಲೇಜು ರಸ್ತೆಯಲ್ಲಿನ ಪಂಚಾಯಿತಿ ಜಾಗದಲ್ಲಿ ಕಸ ತ್ಯಾಜ್ಯ ನಿರ್ವಹಣಾ ಘಟಕವನ್ನು ತೆರೆದು ಶಾಸಕರನ್ನು ಆಹ್ವಾನಿಸಿ ಉದ್ಘಾಟನೆ ಕೂಡ ಮಾಡಿತ್ತು.