ಸೋಮವಾರಪೇಟೆ, ಮಾ. ೧೨: ಗೌಡಳ್ಳಿ ಶ್ರೀ ನವದುರ್ಗಾ ಪರಮೇಶ್ವರಿ ದೇವಾಲಯದ ಜಾತ್ರಾ ಮಹೋತ್ಸವಕ್ಕೆ ಗೌಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆ.ಕೆ.ಸುಮ ಬುಧವಾರ ಚಾಲನೆ ನೀಡಿದರು.

ಜಾತ್ರೋತ್ಸವದ ಅಂಗವಾಗಿ ಬೆಳಿಗ್ಗೆ ಗುಡ್ಡಗಾಡು ಓಟದ ಸ್ಪರ್ಧೆ ನಡೆಯಿತು. ಪುರುಷರ ವಿಭಾಗದಲ್ಲಿ ಕುಶಾಲನಗರದ ನಿತೀನ್ ಪ್ರಥಮ, ಕೂಡಿಗೆಯ ಭೀಮಾ ಶಂಕರ್ ದ್ವಿತೀಯ, ನಿಶಾಂತ್ ತೃತೀಯ, ಮಹಿಳೆಯರ ವಿಭಾಗದಲ್ಲಿ ಕೂಡಿಗೆಯ ಸಿ.ಎಂ.ಶೈಲಾ ಪ್ರಥಮ, ಬಿ.ಯು.ಭವ್ಯ ದ್ವಿತೀಯ, ಕುಶಾಲನಗರ ಗಾನವಿ ತೃತೀಯ ಸ್ಥಾನ ಪಡೆದರು.

ಪಶುವೈದ್ಯ ಇಲಾಖೆಯ ವತಿಯಿಂದ ಪಶುಚಿಕಿತ್ಸಾ ಶಿಬಿರ ನಡೆಯಿತು. ಉತ್ತಮ ರಾಸುಗಳಿಗೆ ಬಹುಮಾನ ವಿತರಿಸಲಾಯಿತು.

ಹಾರಳ್ಳಿ ಗ್ರಾಮದ ಚಂದ್ರಪ್ಪ ಅವರ ಹಸುವಿಗೆ ಪ್ರಥಮ ಹಾಗೂ ದಿಲೀಪ್ ಅವರ ಹಸುವಿಗೆ ದ್ವಿತೀಯ ಬಹುಮಾನ ನೀಡಲಾಯಿತು. ಕಡಸುಗಳ ವಿಭಾಗದಲ್ಲಿ ಗೌಡಳ್ಳಿ ವೀರಭದ್ರಪ್ಪ ಅವರು ಸಾಕಿದ ಕಡಸು ಪ್ರಥಮ ಹಾಗೂ ಮಹೇಶ್ (ದ್ವಿತೀಯ), ಎಮ್ಮೆಗಳ ವಿಭಾಗದಲ್ಲಿ ಗೌಡಳ್ಳಿ ವೀರರಾಜಪ್ಪ ಅವರ ಎಮ್ಮೆಗೆ ಪ್ರಥಮ ಬಹುಮಾನ ನೀಡಲಾಯಿತು.

ಕಾರ್ಯಕ್ರಮದಲ್ಲಿ ದೇವಾಲಯ ಸಮಿತಿ ಅಧ್ಯಕ್ಷ ಬಿ.ಪಿ.ಮೊಗಪ್ಪ, ಗೌರವಾಧ್ಯಕ್ಷ ಎಚ್.ಆರ್.ಮುತ್ತಣ್ಣ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರೋಹಿಣಿ, ಸದಸ್ಯರಾದ ಪ್ರಸನ್ನ, ನವೀನ್, ವೆಂಕಟೇಶ್, ಗೌಡಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಇಂದೂಧರ್, ಪಿಡಿಒ ಲಿಖಿತ, ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಕೆ.ಶಿವಪ್ರಕಾಶ್, ದೇವಾಲಯ ಸಮಿತಿಯ ಹಿರಿಯ ಪದಾಧಿಕಾರಿಗಳಾದ ಜಿ.ಎ.ಮಹೇಶ್, ಕೆ.ಎಸ್.ಮೋಹನ್, ಎಚ್.ಎಸ್. ಕೊಮಾರೀಗೌಡ, ಪಶುವೈದ್ಯರಾದ ಸತೀಶ್ ಕುಮಾರ್, ಲೋಕೇಶ್, ಕರವೇ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ, ಅರ್ಚಕ ವಿಶ್ವರೂಪಚಾರ್ ಇದ್ದರು.