ಪೊನ್ನಂಪೇಟೆ, ಮಾ. ೧೦ : ಜಿಲ್ಲೆಯಲ್ಲಿ ಇಂದು ಸಂಭವಿಸಿದ್ದ ಎರಡು ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಈರ್ವರು ದುರ್ಮರಣ ಹೊಂದಿರುವ ಘಟನೆ ಸಂಭವಿಸಿದೆ.ಕುಟ್ಟ ಸಮೀಪದ ನಾಲ್ಕೇರಿಯಲ್ಲಿ ಇಂದು ಸಂಜೆ ಸ್ಕೂಟರ್ ಹಾಗೂ ಮಜ್ದಾ ಗಾಡಿಯ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಸ್ಕೂಟರ್ ಸವಾರ ಚೂರಿಕಾಡು ಗ್ರಾಮದ ನೆಲ್ಲಿರ ಕಾಶಿ ಪೂವಯ್ಯ (೭೫) ಎಂಬವರು ಸ್ಥಳದಲ್ಲೇ ಮೃತಪಟ್ಟಿರುತ್ತಾರೆ. ಅಪಘಾತದ ನಂತರ ಮಜ್ದಾ ಗಾಡಿಯ ಚಾಲಕ ವಾಹನ ವನ್ನು ನಿಲ್ಲಿಸದೆ ಪರಾರಿಯಾಗಿದ್ದಾನೆ.ಕಾಶಿ ಪೂವಯ್ಯ ಕಾನೂರು ಕಡೆಯಿಂದ ಇಂದು ಸಂಜೆ ಚೂರಿಕಾಡುವಿನ ತನ್ನ ಮನೆಗೆ ಸ್ಕೂಟರ್ ನಲ್ಲಿ ತೆರಳುತಿದ್ದ ಸಂದರ್ಭ ನಾಲ್ಕೇರಿಯಲ್ಲಿ ಅಪಘಾತ ಸಂಭವಿಸಿದೆ. ಹೆಲ್ಮೆಟ್ ಧರಿಸಿದ್ದರೂ ಕೂಡ ಡಿಕ್ಕಿಯಾದ ರಭಸಕ್ಕೆ ಕಾಶಿ ಪೂವಯ್ಯ ಸ್ಥಳದಲ್ಲೇ ಅಸುನೀಗಿದ್ದಾರೆ.(ಮೊದಲ ಪುಟದಿಂದ) ಕುಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತ ಪಡಿಸಿದ ಆರೋಪಿಯ ಪತ್ತೆಗೆ ಪೊಲೀಸರು ಮುಂದಾಗಿರುವುದಾಗಿ ತಿಳಿದು ಬಂದಿದೆ. ಮೃತ ಶರೀರವನ್ನು ಕುಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ.

ನಾಳೆ ಪೇರ್ಮಾಡು ದೇವಸ್ಥಾನದಲ್ಲಿ ಶಿವರಾತ್ರಿ ಪೂಜಾ ಕಾರ್ಯಕ್ರಮ ಇರುವುದರಿಂದ ಮಧ್ಯಾಹ್ನ ೧೨ ಗಂಟೆಯ ನಂತರ ಕಾಶಿ ಪೂವಯ್ಯ ಅವರ ಮೃತ ದೇಹವನ್ನು ಆಸ್ಪತ್ರೆಯಿಂದ ಮೃತರ ಸ್ವಗೃಹ ಚೂರಿಕಾಡುವಿಗೆ ತರಲಾಗುವುದು ಎಂದು ಕುಟುಂಬ ಮೂಲಗಳಿಂದ ತಿಳಿದು ಬಂದಿದೆ.

ಕುಶಾಲನಗರ: ಮತ್ತೊಂದು ಪ್ರಕರಣದಲ್ಲಿ ಸ್ಕೂಟಿಗೆ ಹಿಂಬದಿಯಿAದ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸವಾರ ದುರ್ಮರಣ ಹೊಂದಿರುವ ಘಟನೆ ಗುಡ್ಡೆಹೊಸೂರು ಬಳಿ ಸಂಭವಿಸಿದೆ. ಮೂಲತ: ಕಾರುಗುಂದ ಗ್ರಾಮ ನಿವಾಸಿ, ಗುಡ್ಡೆಹೊಸೂರುವಿನಲ್ಲಿ ನೆಲೆಸಿದ್ದ ಅಜ್ಜೇಟಿರ ಮೋಹನ್ (ಜೈ -೪೪) ಮೃತಪಟ್ಟ ದುರ್ಧೈವಿ. ಇಂದು ಸಂಜೆ ಸ್ಕೂಟಿಯಲ್ಲಿ ಕುಶಾಲನಗರದಿಂದ ಗುಡ್ಡೆಹೊಸೂರುವಿನ ತನ್ನ ಮನೆಗೆ ತೆರಳುತ್ತಿದ್ದ ಸಂದರ್ಭ ಹಿಂದಿನಿAದ ಬಂದ ಪ್ರವಾಸಿಗರ ಕಾರು (ಟಿಎಸ್.೦೭ ಹೆಚ್‌ಸಿ.೯೩೮೯)ಡಿಕ್ಕಿಯಾಗಿದೆ. ಗಂಭೀರ ಗಾಯಗಳಾಗಿದ್ದ ಮೋಹನ್‌ನನ್ನು ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ಸಂದರ್ಭ ಸುಳ್ಯ ಬಳಿ ಸಾವನ್ನಪ್ಪಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ತಾ.೧೧ ರಂದು (ಇಂದು) ಸ್ವಗ್ರಾಮ ಕಾರುಗುಂದದಲ್ಲಿ ನೆರವೇರಲಿದೆ. ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಸಂಚಾರಿ ಠಾಣೆಯಲ್ಲಿ ಮಾಹಿತಿ ಬಯಸಿದ ಸಂದರ್ಭ ದೂರವಾಣಿ ಕರೆ ಸ್ವೀಕರಿಸಿದ ಮಹಿಳಾ ಪೊಲೀಸ್ ‘ಇನ್ನೂ ಏನೂ ಕೇಸು ಆಗಿಲ್ಲ ಎಂದು ಹೇಳಿದರೆ. ಅತ್ತಲಿಂದ ಮತ್ತೋರ್ವ ಸಿಬ್ಬಂದಿ ಮತ್ತೆ ಕರೆ ಮಾಡಲು ಹೇಳು ಎಂದರು. ತಡವಾಗಿದೆ ಮಾಹಿತಿ ಕೊಡಿ ಎಂದಾಗ ಘಟನೆ ಆಗಿದ್ದರೂ ಪತ್ರಿಕೆಯವರಿಗೆ ಮಾಹಿತಿ ಕೊಡಬೇಕೆಂದು ನಿಯಮ ಇಲ್ಲವಲ್ಲ..?’ ಎಂದು ಉಡಾಫೆಯ ಮಾತನಾಡಿ ದೂರವಾಣಿ ಕರೆ ಕಟ್ ಮಾಡಿದರು..!