ಗೋಣಿಕೊಪ್ಪಲು, ಮಾ. ೧೦: ದುಬಾರೆ ಹೊಳೆ ಯಲ್ಲಿ ಈಜಲು ತೆರಳಿದ್ದ ಮಿತ್ರರು ಅಪಾಯದಲ್ಲಿ ಸಿಲುಕಿದಾಗ ಅವರಲ್ಲಿ ಓರ್ವನನ್ನು ರಕ್ಷಿಸಿ, ಮತ್ತೋರ್ವನನ್ನು ರಕ್ಷಿಸಲು ಮುಂದಾಗಿ ದುರಂತ ಸಾವನ್ನಪ್ಪಿದ್ದ ಗೋಣಿಕೊಪ್ಪಲು ಲಯನ್ಸ್ ಶಾಲೆಯ ವಿದ್ಯಾರ್ಥಿ ಮಾದಿರ ಲೆನಿನ್ ಬೋಪಣ್ಣಗೆ ಮರಣೋತ್ತರವಾಗಿ ಹೊಯ್ಸಳ ಶೌರ್ಯ ಪ್ರಶಸ್ತಿಯನ್ನು ನೀಡಲಾಗಿದೆ.ಇಂದು ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪೋಷಕರಿಗೆ ಪ್ರಶಸ್ತಿ ವಿತರಿಸಿದರು.

ಲೆನಿನ್ ಪೋಷಕರಾದ ಹೈಸೊಡ್ಲೂರುವಿನ ಮಾದಿರ ಹರೀಶ್ ಹಾಗೂ ಕವಿತಾ ದಂಪತಿ ಪ್ರಶಸ್ತಿ ಸ್ವೀಕರಿಸಿದರು.೨೦೨೦ರ ಮಾರ್ಚ್ ೪ ರಂದು ದುರಂತ ನಡೆದಿತ್ತು. ಸ್ಕೌಟ್ ಮತ್ತು ಗೈಡ್ಸ್ನ (ಮೊದಲ ಪುಟದಿಂದ) ಪ್ರವಾಸದ ವೇಳೆ ತಂಡದ ನಾಯಕನಾಗಿದ್ದ ಲೆನಿನ್ ತನ್ನ ಸಹಪಾಠಿ ಶಾನ್ ಮಂದಣ್ಣ ಎಂಬ ವಿದ್ಯಾರ್ಥಿಯನ್ನು ರಕ್ಷಿಸಿದ್ದ. ಬಳಿಕ ಕೋದೇಂಗಡ ಶ್ರೇಯಸ್ ಚಂಗಪ್ಪ ಎಂಬ ವಿದ್ಯಾರ್ಥಿಯ ರಕ್ಷಣೆಗೆ ಯತ್ನಿಸಿದಾಗ ಇಬ್ಬರೂ ಸಾವಿಗೀಡಾಗಿದ್ದರು.

ಈ ಸಂದರ್ಭ ಸ್ಕೌಟ್ ಮತ್ತು ಗೈಡ್ಸ್ ಆಯುಕ್ತರಾದ ಪಿ.ಜಿ.ಆರ್. ಸಿಂಧ್ಯಾ, ಶಾಲಾ ಪ್ರಾಂಶುಪಾಲೆ ಎ.ಬಿ. ಅಕ್ಕಮ್ಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮೂಲಕ ಲೆನಿನ್‌ಗೆ ಶೌರ್ಯ ಪ್ರಶಸ್ತಿಗೆ ಶಿಫಾರಸ್ಸು ಮಾಡಿದ್ದರು. ಇಂದಿನ ಕಾರ್ಯಕ್ರಮದಲ್ಲಿ ಪಿ.ಜಿ.ಆರ್. ಸಿಂಧ್ಯಾ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವೆ ಶಶಿಕಲಾ ಜೊಲ್ಲೆ ಮತ್ತಿತರರು ಪಾಲ್ಗೊಂಡಿದ್ದರು.