*ಗೋಣಿಕೊಪ್ಪ, ಮಾ. ೮: ದಕ್ಷಿಣ ಕೊಡಗಿನಲ್ಲಿ ಮೂರು ಜೀವ ಬಲಿ ಪಡೆದ ಹುಲಿಯನ್ನು ಅರಣ್ಯ ಇಲಾಖೆ ಸೆರೆ ಹಿಡಿಯದಿದ್ದರೆ ಪೊನ್ನಂಪೇಟೆ ಅರಣ್ಯ ಕಚೇರಿ ಎದುರು ಗಂಜಿ ಬೇಯಿಸಿ ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ವೀರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕು ಯರವ ಯುವ ಒಕ್ಕೂಟ ಎಚ್ಚರಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಗೌರವಾಧ್ಯಕ್ಷ ಪಿ.ಎಸ್. ಮುತ್ತ ಕಳೆದ ೧೫ ದಿನಗಳಿಂದ ಪೊನ್ನಂಪೇಟೆ ತಾಲೂಕು ವ್ಯಾಪ್ತಿಯಲ್ಲಿ ಹುಲಿ ನಿರಂತರವಾಗಿ ದಾಳಿ ಮಾಡುತ್ತಿದೆ. ಆದರೂ, ಇಲಾಖೆ ಈ ಬಗ್ಗೆ ಗಂಭೀರವಾಗಿ ಪರಿಗಣಿಸದೆ ಹುಲಿ ಹಿಡಿಯುವಲ್ಲಿ ವಿಫಲವಾಗಿದೆ. ಇದರ ಪರಿಣಾಮದಿಂದ ಹುಲಿ ನರಬಲಿ ಪಡೆಯುತ್ತಲೇ ಇದೆ. ಕೂಲಿ ಕಾರ್ಮಿಕರು ಕೆಲಸಗಳಿಗೆ ತೆರಳಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಆತಂಕದಲ್ಲಿ ದಿನದೂಡುವ ಸ್ಥಿತಿ ಎದುರಾಗಿದೆ. ಕೂಡಲೇ ಅರಣ್ಯ ಇಲಾಖೆ ಹುಲಿಯನ್ನು ಹಿಡಿಯದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಗೋಷ್ಠಿಯಲ್ಲಿ ವೈ.ಸಿ. ಶಂಕ್ರು, ವೈ.ಎಂ. ಸಿದ್ದು, ಪಿ.ಬಿ. ರಾಜು, ಪಿ.ಎಂ. ರಾಮು, ಪಿ.ಸಿ. ಸುರೇಶ್, ಪಿ.ಜೆ. ಸುಬ್ರಮಣಿ, ವೈ.ಬಿ. ಗಣೇಶ, ವೈ.ಕೆ. ಗಣೇಶ, ಪಿ. ಅಣ್ಣಯ್ಯ, ಉಪಸ್ಥಿತರಿದ್ದರು.
ಶಾಸಕರುಗಳ ರಾಜೀನಾಮೆಗೆ ಒತ್ತಾಯ
ಮಡಿಕೇರಿ: ದಕ್ಷಿಣ ಕೊಡಗಿನಲ್ಲಿ ಹುಲಿಯ ಅಟ್ಟಹಾಸಕ್ಕೆ ಮೂರನೇ ಜೀವ ಬಲಿಯಾಗಲು ಸರ್ಕಾರದ ನಿರ್ಲಕ್ಷö್ಯ ಮತ್ತು ಜನಪ್ರತಿನಿಧಿಗಳ ಅಸಡ್ಡೆಯೇ ಕಾರಣವೆಂದು ಆರೋಪಿಸಿರುವ ಕೊಡಗು ರಕ್ಷಣಾ ವೇದಿಕೆಯ ಅಧ್ಯಕ್ಷ ಪವನ್ ಪೆಮ್ಮಯ್ಯ, ಅರಣ್ಯ ಸಚಿವರು ಹಾಗೂ ಜಿಲ್ಲೆಯ ಶಾಸಕರುಗಳು ಘಟನೆಯ ಹೊಣೆ ಹೊತ್ತು ತಕ್ಷಣ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಫೆಬ್ರವರಿ ತಿಂಗಳಿನಲ್ಲಿ ಮೊದಲ ಜೀವ ಬಲಿಯಾದಾಗಲೇ ಅರಣ್ಯ ಅಧಿಕಾರಿಗಳು ಎಚ್ಚೆತ್ತುಕೊಂಡು ಹುಲಿಯನ್ನು ಸೆರೆ ಹಿಡಿದಿದ್ದರೆ ಅಥವಾ ಕೊಂದು ಹಾಕಿದ್ದರೆ ಪರಿಸ್ಥಿತಿ ಕೈಮೀರುತ್ತಿರಲಿಲ್ಲವೆಂದು ಅಭಿಪ್ರಾಯಪಟ್ಟಿದ್ದಾರೆ.
ಶಾಸಕರು ರಾಜೀನಾಮೆ ನೀಡಲಿ
ದ.ಕೊಡಗಿನಲ್ಲಿ ನಿರಂತರ ಹುಲಿ ದಾಳಿ ನಡೆಸುತ್ತಿದ್ದರೂ ಇಲಾಖೆಯ ಸಿಬ್ಬಂದಿಗಳ ಮೂಲಕ ನರಭಕ್ಷಕ ಹುಲಿಯನ್ನು ಹಿಡಿಸುವಲ್ಲಿ ಶಾಸಕರುಗಳು ಸತತ ವಿಫಲರಾಗಿದ್ದಾರೆ. ಇವರ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ. ಮಂಜುನಾಥ್ ಆಗ್ರಹಿಸಿದ್ದಾರೆ.