ವೀರಾಜಪೇಟೆ, ಮಾ. ೮: ಸಮುದಾಯದ ಕುಟುಂಬಗಳನ್ನು ಒಂದೇ ವೃತ್ತದಲ್ಲಿ ಒಂದೂಗೂಡಿಸಲು ಕ್ರೀಡೆಯು ಸಹಕಾರಿಯಾಗಿದೆ. ಕ್ರೀಡೆಯಲ್ಲಿ ಭಾಗವಹಿಸಿ ಶಿಸ್ತುಬದ್ಧ ಪ್ರದರ್ಶನ ಮಾಡಿದಲ್ಲಿ ಜನಾಂಗಕ್ಕೆ ಮತ್ತು ಕ್ರೀಡೆಗೆ ಕೀರ್ತಿ ಸಲ್ಲುತ್ತದೆ ಎಂದು ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಸದಸ್ಯ ಚೆಂದ್ರಿಮಾಡ ಕೀಶನ್ ಕಾವೇರಪ್ಪ ಹೇಳಿದರು.

ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಂಗಾಲ ಪೆರ್ನಾಡ್ ಗ್ರಾಮದ ಪೆರ್ನಾಡ್ ಯೂತ್ ಕ್ರಿಕೆರ‍್ಸ್ ವತಿಯಿಂದ ಕೆಂಬಟ್ಟಿ ಜನಾಂಗದ ದ್ವಿತೀಯ ವರ್ಷದ ಕ್ರಿಕೆಟ್ ನಮ್ಮೆ ನಾಂಗಾಲ ಸ.ಕಿ. ಪ್ರಾಥಮಿಕ ಶಾಲೆಯ ಮೈದಾನದಲ್ಲಿ ನಡೆಯಿತು. ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಕೀಶನ್ ಕಾವೇರಪ್ಪ ಮಾತನಾಡಿದರು.

ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸರಸು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಜನಾಂಗವನ್ನು ಸಾಮಾಜಿಕವಾಗಿ ಅರ್ಥಿಕವಾಗಿ ಬಲಪಡಿಸಲು ಯುವ ಜನತೆ ಮುಂದಾಗಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಟಿ.ಆರ್. ರಮ್ಯ, ಪೆರ್ನಾಡ್ ಯೂತ್ ಕ್ರಿಕೆರ‍್ಸ್ ಅಧ್ಯಕ್ಷ ಗಿರೀಶ್, ಗ್ರಾಮದ ಹಿರಿಯರಾದ ತಾಯಮ್ಮ ಮತ್ತು ಬೊಳ್ಳಮ್ಮ ಉಪಸ್ಥಿತರಿದ್ದರು.

ಅಂತಿಮ ಪಂದ್ಯಾಟದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕೈಕೇರಿ ತಂಡವು ನಿಗದಿತ ೬ ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ ೩೬ ರನ್ ಗಳಿಸಿತು. ನಂತರದಲ್ಲಿ ಅರಮೇರಿ ತಂಡವು ಮೂರು ವಿಕೆಟ್ ನಷ್ಟಕ್ಕೆ ೩೭ ರನ್ ಬಾರಿಸಿ ಜಯಗಳಿಸಿತು. ವಿಜೇತ ತಂಡಕ್ಕೆ ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ಆಕರ್ಷಕ ಟ್ರೋಫಿ ಮತ್ತು ನಗದು ನೀಡಲಾಯಿತು. ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಕೈಕೇರಿ ತಂಡದ ಹೇಮಂತ್, ಉತ್ತಮ ದಾಂಡಿಗ ಪ್ರಶಸ್ತಿಯನ್ನು ಅರಮೇರಿ ತಂಡದ ದೀಪು, ಪಂದ್ಯ ಪುರುಷೋತ್ತಮ್ಮ ಪ್ರಶಸ್ತಿಯನ್ನು ಅರಮೇರಿ ತಂಡದ ಚಂದನ್ ಪಡೆದುಕೊಂಡರು.