ಮಡಿಕೇರಿ, ಮಾ. ೮: ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲ ಹೋಬಳಿಯ ಟಿ.ಶೆಟ್ಟಿಗೇರಿ, ಕುಮಟೂರು ಮತ್ತು ಬೆಳ್ಳೂರು ಗ್ರಾಮ ವ್ಯಾಪ್ತಿಯಲ್ಲಿ ಹುಲಿ ಹಾವಳಿ ಅಧಿಕವಾಗಿರುವ ಹಿನ್ನೆಲೆ ಅರಣ್ಯ ಸಚಿವ ಅರವಿಂದ ಲಿಂಬಾವಳಿ, ಶಾಸಕ ಕೆ.ಜಿ. ಬೋಪಯ್ಯ, ವನ್ಯಜೀವಿ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕೊಡಗು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರು ಸೋಮವಾರ ಬೆಂಗಳೂರಿನಲ್ಲಿ ಹುಲಿ ಸೆರೆಹಿಡಿಯುವ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ.

ಶ್ರೀಮಂಗಲ ಹೋಬಳಿಯ ಟಿ.ಶೆಟ್ಟಿಗೇರಿ, ಕುಮಟೂರು ಮತ್ತು ಬೆಳ್ಳೂರು ಗ್ರಾಮ ವ್ಯಾಪ್ತಿಯಲ್ಲಿ ಹುಲಿ ಹಾವಳಿಯಿಂದಾಗಿ ನಾಗರಿಕರಿಗೆ ತುಂಬಾ ತೊಂದರೆಯಾಗಿದ್ದು, ಸಾರ್ವಜನಿಕರು ಜೀವ ಭಯದಲ್ಲಿ ಪ್ರತಿ ನಿತ್ಯ ಕಾಲ ಕಳೆಯುವಂತಾಗಿದೆ. ಆದ್ದರಿಂದ ಹುಲಿಯನ್ನು ಸೆರೆಹಿಡಿಯುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಬೇಕಿದೆ ಎಂದು ಶಾಸಕ ಕೆ.ಜಿ. ಬೋಪಯ್ಯ ಅರಣ್ಯ ಸಚಿವರಲ್ಲಿ ಮನವಿ ಮಾಡಿದ್ದಾರೆ.

ಈ ಬಗ್ಗೆ ಅರಣ್ಯ ಇಲಾಖೆ ಉನ್ನತಮಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದ ಅರಣ್ಯ ಸಚಿವರಾದ ಅರವಿಂದ ಲಿಂಬಾವಳಿ ಅವರು ಮಾನವ ಪ್ರಾಣ ಹಾನಿ ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಕ್ರಮವಹಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಹುಲಿಯನ್ನು ತಕ್ಷಣವೇ ಸೆರೆ ಹಿಡಿಯಬೇಕು. ಈ ಸಂಬAಧ ಅಗತ್ಯ ಕಾರ್ಯಾಚರಣೆ ತಂಡವನ್ನು ಕಳುಹಿಸಬೇಕು. ಯಾವುದೇ ಕಾರಣಕ್ಕೂ ಮಾನವ ಪ್ರಾಣ ಹಾನಿ ಉಂಟಾಗದAತೆ ಎಚ್ಚರವಹಿಸಬೇಕು ಎಂದು ಸಚಿವರು ನಿರ್ದೇಶನ ನೀಡಿದರು.