ನಾಪೋಕ್ಲು, ಮಾ. ೯: ಶಿವರಾತ್ರಿ ಹತ್ತಿರ ಬಂತೆAದರೆ ಕಾವೇರಿ ಬೈವಾಡ್ ಸಮಿತಿಯಿಂದ ಪುಣ್ಯಕ್ಷೇತ್ರ ತಲಕಾವೇರಿಗೆ ಹೋಗಲು ವ್ರತಧಾರಿಗಳು ಖಾವಿ ಧರಿಸಿರುವವರನ್ನು ಕೊಡಗಿನಲ್ಲಿ ಕಾಣಬಹುದಾಗಿದೆ, ಶಬರಿ ಮಲೆಯಂತೆ ಇಲ್ಲಿಯೂ ವ್ರತಧಾರಿಗಳು ಕಟ್ಟುಪಾಡಿನಂತೆ ದೇವರ ಧ್ಯಾನದಲ್ಲಿ ತೊಡಗಿಸಿಕೊಂಡು ಸುಮಾರು ೪೮ ದಿನಗಳ ಕಾಲ ಶ್ರದ್ಧಾಭಕ್ತಿಯಿಂದ ವ್ರತವನ್ನು ಆಚರಿಸಿ ಶಿವರಾತ್ರಿಯ ದಿನ ಭಾಗಮಂಡಲ, ತಲಕಾವೇರಿಗೆ ಹೋಗುವುದನ್ನು ಕಾವೇರಿ ಬೈವಾಡ್ ಸಮಿತಿಯವರು ಸುಮಾರು ೩೨ ವರ್ಷಗಳಿಂದ ಆಚರಿಸುತ್ತಾ ಬಂದಿರುತ್ತಾರೆ. ಶಬರಿಮಲೆಯಂತೆಯೇ ಇವರಿಗೂ ಒಬ್ಬರು ಗುರುಸ್ವಾಮಿ ಇದ್ದು ವ್ರತ ಆಚರಿಸುವವರು. ದೇವಾಲಯದಲ್ಲಿ ಗುರು ಸ್ವಾಮಿಯಿಂದ ಮಾಲೆಯನ್ನು ಧರಿಸಿಕೊಂಡು ವ್ರತ ಆಚರಣೆಯಲ್ಲಿ ತೊಡಗುತ್ತಾರೆ.
ಮಾಲೆ: ಮಾಲೆ ಎಂದರೆ ಕೊರಳಿಗೆ ಶ್ರೀ ಮಾತೆ ಕಾವೇರಿ ತಾಯಿಯ ಮುದ್ರೆ ಇರುವ ರುದ್ರಾಕ್ಷಿ ಮಾಲೆ, ಗಂಡಸರಿಗೆ ಕಾವಿ ಬಣ್ಣದ ಪಂಚೆ ಮತ್ತು ಹಸಿರು ಬಣ್ಣದ ರುಮಾಲು, ಹೆಂಗಸರಿಗೆ ಕಾವಿ ಬಣ್ಣದ ಸೀರೆ ಮತ್ತು ಹಸಿರು ಬಣ್ಣದ ರವಿಕೆ, ಅಥವಾ ಜಾಕೆಟ್.
ವ್ರತ: ಕಾವೇರಿ ಬೈವಾಡ್ಗೆ ಮೊದಲ ಬಾರಿ ಬರುವವರು ಸುಮಾರು ೪೮ ದಿನಗಳ ಕಾಲ ವ್ರತವನ್ನು ಆಚರಿಸತಕ್ಕದ್ದು. ಅದರಂತೆ ೧೧ ದಿನಗಳ ಕಾಲ ವ್ರತ ಆಚರಿಸಿ ಬರಬಹುದು. ಈ ಸಮಯದಲ್ಲಿ ದಿನಂಪ್ರತಿ ಎರಡು ಬಾರಿ ಸ್ನಾನ ಮಾಡಿ ಕಾವೇರಿ ಮಾತೆಯ ಶ್ಲೋಕವನ್ನು ದಿನದಲ್ಲಿ ಮೂರು ಬಾರಿ ಪಠಿಸಬೇಕು. ಈ ಸಂದರ್ಭ ಮನಸ್ಸನ್ನು ಸ್ಥಿಮಿತದಲ್ಲಿಟ್ಟುಕೊಂಡು ದೇವರ ಧ್ಯಾನದಲ್ಲಿ ತೊಡಗಿಸಿಕೊಳ್ಳಬೇಕು.
ಕಟ್ಟು ತುಂಬಿಸುವುದು: ವ್ರತಧಾರಿಗಳು ಬೈವಾಡ್ಗೆ ಹೊರಡುವ ಒಂದು ದಿನ ಮೊದಲು ಭಕ್ತಿಯಿಂದ ದೇವಾಲಯದಲ್ಲಿ ದೇವರ ಕಟ್ಟನ್ನು ತುಂಬಿಸುತ್ತಾರೆ. ಇದಕ್ಕಾಗಿ ಒಂದು ದೊಡ್ಡ ಬ್ಯಾಗ್ ಮತ್ತು ೩ ಚಿಕ್ಕ ಬ್ಯಾಗ್, ಅಲ್ಲದೆ ಕಟ್ಟಿಗೆ ಬೇಕಾದ ಸಾಮಗ್ರಿಗಳು ೬ ತೆಂಗಿನಕಾಯಿ, ಐದೂವರೆ ಸೇರು ಅಕ್ಕಿ, ೧೧ ರೂಪಾಯಿ ಕಾಣಿಕೆ, ಅಗರಬತ್ತಿ, ಕರ್ಪೂರ, ಏಲಕ್ಕಿ, ಕರಿಮೆಣಸು, ಕುಂಕುಮ ಇದನ್ನು ಬ್ಯಾಗ್ನಲ್ಲಿ ಇರಿಸಿ ಶಿವರಾತ್ರಿ ದಿನ ಭಾಗಮಂಡಲ ಸಂಗಮದಲ್ಲಿ ಸ್ನಾನ ಮುಗಿಸಿ ಶ್ರೀ ಭಗಂಡೇಶ್ವರನ ದರ್ಶನ ಪಡೆದು ಪತ್ತಾಯಕ್ಕೆ ಅಕ್ಕಿ ಹಾಕಿ, ಈಡುಕಾಯಿ ಒಡೆದು ಅಲ್ಲಿಂದ ತಲಕಾವೇರಿ ಸನ್ನಿಧಾನದಲ್ಲಿ ಶ್ರೀ ಕಾವೇರಿ ಮಾತೆಗೆ ಬೈವಾಡನ್ನು ಅಗಸ್ತೇಶ್ವರನ ಸನ್ನಿಧಾನದಲ್ಲಿ ಅರ್ಪಿಸಿ ತಲಕಾವೇರಿಯಲ್ಲಿ ಪುಣ್ಯತೀರ್ಥ ಸ್ನಾನದ ಬಳಿಕ ಸಾಮೂಹಿಕ ಕುಂಕುಮಾರ್ಚನೆಯನ್ನು ಮಾಡಿ ಶ್ರೀ ಕ್ಷೇತ್ರದ ಅಭಿವೃದ್ಧಿ ಹಾಗೂ ಒಳಿತಿಗಾಗಿ ಪ್ರಾರ್ಥಿಸಿ ಬರುತ್ತಾರೆ.
ಕಳೆದ ೩೨ ವರ್ಷಗಳಿಂದ ಇದರ ನೇತೃತ್ವವನ್ನು ಹಿರಿಯರಾದ ಗುರುಸ್ವಾಮಿ ಬಿದ್ದಂಡ ಪೊನ್ನಣ್ಣ ಮತ್ತು ಸಮಿತಿಯ ಅಧ್ಯಕ್ಷ ಪಾಡಿಯಮ್ಮಂಡ ಮುತ್ತಮ್ಮಯ್ಯ, ಬೊಟ್ಟೋಳಂಡ ಗಣೇಶ್ ಅವರು ನಡೆಸಿಕೊಂಡು ಬರುತ್ತಿದ್ದಾರೆ.
ತಾ. ೧೧ ರಂದು ಕಾರ್ಯಕ್ರಮ
ಶಿವರಾತ್ರಿ ಹಬ್ಬದ ಪ್ರಯುಕ್ತ ಕಾವೇರಿ ಬೈವಾಡ್ ಕಾರ್ಯಕ್ರಮ ಪ್ರತಿವರ್ಷದಂತೆ ಈ ವರ್ಷವೂ ನಡೆಯಲಿದ್ದು ಈ ಪ್ರಯುಕ್ತ ತಾ. ೧೦ ರಂದು (ಇಂದು) ಸಂಜೆ ಹಳೆತಾಲೂಕು ಭಗವತಿ ದೇವಾಲಯದಲ್ಲಿ ಕಟ್ಟುತುಂಬಿಸಿ ತಾ. ೧೧ ರಂದು ಪುಣ್ಯಕ್ಷೇತ್ರ ಭಾಗಮಂಡಲ ಮತ್ತು ತಲಕಾವೇರಿಗೆ ಹೋಗಿ ದೇವರ ದರ್ಶನ ಪಡೆಯಲಿರುವುದಾಗಿ ಪಾರಾಣೆ ಹಾಗೂ ನಾಪೋಕ್ಲು ಬೈವಾಡ್ ಸಮಿತಿ ತಿಳಿಸಿದೆ.
-ದುಗ್ಗಳ ಸದಾನಂದ