ಶ್ರೀಮಂಗಲ, ಮಾ. ೬ : ಶ್ರೀಮಂಗಲ ಹೋಬಳಿಯಲ್ಲಿ ಹುಲಿ ದಾಳಿ ಮುಂದುವರೆದಿದ್ದು, ಶುಕ್ರವಾರ ರಾತ್ರಿ ೧೨ ಗಂಟೆಗೆ ರೈತರೋರ್ವರ ಹಸುವಿನ ಮೇಲೆ ಹುಲಿ ಎರಗಿ ಗಂಭೀರವಾಗಿ ಗಾಯಗೊಳಿಸಿದೆ.ಟಿ.ಶೆಟ್ಟಿಗೇರಿ ವಗರೆ ಗ್ರಾಮದ ಉಳುವಂಗಡ ಜೀವನ್ ಅವರ ಮನೆಯಿಂದ ಕೇವಲ ೬೦ ಅಡಿ ದೂರದಲ್ಲಿರುವ ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಾಲು ಕರೆಯುವ ಹಸುವಿನ ಮೇಲೆ ಹುಲಿ ದಾಳಿ ಮಾಡಿದ ಪರಿಣಾಮ ಹಸುವಿನ ಕುತ್ತಿಗೆ ಮತ್ತು ಮುಖದ ಭಾಗಕ್ಕೆ ತೀವ್ರ ಸ್ವರೂಪದ ಗಾಯವಾಗಿದೆ. ಹುಲಿ ದಾಳಿಗೆ ಹಸು ಅರಚುತ್ತಿದ್ದು ನಾಯಿಗಳು ಬೊಗಳುವ ಶಬ್ದಕ್ಕೆ ಮಾಲೀಕ ಜೀವನ್ ಅವರು ಮನೆಯಿಂದ ಹೊರ ಬಂದು ಕೂಗಿಕೊಂಡಾಗ ಹುಲಿ ಹಸುವನ್ನು ಬಿಟ್ಟು ಪರಾರಿಯಾಗಿದೆ.ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಸುತ್ತಮುತ್ತಲ ಪ್ರದೇಶದಲ್ಲಿ ಹುಲಿ ಹೆಜ್ಜೆ ಗುರುತುಗಳನ್ನು ಪರಿಶೀಲಿಸಿದ್ದು ಸಮೀಪದ ದೇವರ ಕಾಡಿನಲ್ಲಿ ಹಾಗೂ ವಗರೆಯಿಂದ ನೆಮ್ಮಲೆ ಕಡೆಗೆ ಹೋಗಿರುವ ಹೆಜ್ಜೆ ಗುರುತುಗಳು ಗದ್ದೆಯಲ್ಲಿ ಕಾಣಿಸಿಕೊಂಡಿದೆ. ಸ್ಥಳಕ್ಕೆ ಆಗಮಿಸಿದ ಶ್ರೀಮಂಗಲ ಪಶುವೈದ್ಯಾಧಿಕಾರಿ ಡಾ|| ಬಿ.ಜಿ.ಗಿರೀಶ್ ಹಸುವಿಗೆ ಚಿಕಿತ್ಸೆ ನೀಡಿದರು.

ಈ ಸಂದರ್ಭ ರೈತ ಮುಖಂಡ ಚೆಟ್ಟಂಗಡ ಕಂಬ ಕಾರ್ಯಪ್ಪ, ಬಿಜೆಪಿ ಕೃಷಿ ಮೋರ್ಚಾ ಅಧ್ಯಕ್ಷ ಕಟ್ಟೇರ ಈಶ್ವರ, ಗ್ರಾಮಸ್ಥರಾದ

(ಮೊದಲ ಪುಟದಿಂದ) ಮಿಲನ್, ಮಿಥನ್, ಚೆಟ್ಟಂಗಡ ಕರುಣ್, ಮಾಣೀರ ವಿಜಯ ನಂಜಪ್ಪ, ಮನ್ನೆರ ರಮೇಶ್, ಉಳುವಂಗಡ ಸಾಬು, ಚಟ್ಟಂಡ ರಘು, ಕರ್ನಂಡ ಚಲನ್, ಮಚ್ಚಮಾಡ ಗಯ, ರನ್ನು ಮತ್ತಿತರರು ಅರಣ್ಯ ಇಲಾಖೆಯ ಮೇಲೆ ಆಕ್ರೋಶ ವ್ಯಕ್ತಪಡಿಸಿ ತಕ್ಷಣ ಹುಲಿ ಸೆರೆ ಹಿಡಿಯಲು ಒತ್ತಾಯಿಸಿದರು.

ಬಿರುನಾಣಿ ಗ್ರಾ.ಪಂ.ವ್ಯಾಪ್ತಿಯ ತೆರಾಲು ಗ್ರಾಮದ ತೂರಂಗೊಲ್ಲಿ ಎಂಬಲ್ಲಿಯೂ ಹುಲಿ ದಾಳಿಗೆ ಹಸು ಬಲಿಯಾಗಿದೆ. ಗ್ರಾಮದ ರೈತ ಬೊಟ್ಟಂಗಡ ಕಾರ್ಯಪ್ಪ ಅವರಿಗೆ ಸೇರಿದ ಹಸುವನ್ನು ಮೇಯಲು ಗದ್ದೆಯಲ್ಲಿ ಕಟ್ಟಿದ್ದ ಸಂದರ್ಭ ಶನಿವಾರ ಸಂಜೆ ವೇಳೆ ಹುಲಿ ದಾಳಿ ಮಾಡಿದೆ.