ಮಡಿಕೇರಿ ಮಾ.೬ : ವೀರಾಜಪೇಟೆ -ಗೋಣಿಕೊಪ್ಪಲು ಮುಖ್ಯರಸ್ತೆಯಲ್ಲಿಯೇ ಇಂದು ಬೆಳಿಗ್ಗೆ ಸುಮಾರು ೭ ಗಂಟೆ ಹೊತ್ತಿನಲ್ಲಿ ರಾಜಾರೋಷವಾಗಿ ಕಾಡಾನೆ ಯೊಂದು ಎದುರಾದ ಘಟನೆ ವರದಿಯಾಗಿದೆ. ಬಿಟ್ಟಂಗಾಲದ ಹೆಗ್ಗಡೆ ಸಮಾಜದ ಎದುರಿನಲ್ಲಿ ಈ ಘಟನೆ ಜರುಗಿದೆ. ಮುಖ್ಯರಸ್ತೆಯಲ್ಲಿ ಬೆಳಗ್ಗಿನ ವಾಕಿಂಗ್ನಲ್ಲಿ ನಿರತರಾಗಿದ್ದ ಪತಿ-ಪತ್ನಿಯರಿಬ್ಬರಿಗೆ ಕಾಡಾನೆ ಎದುರಾಗಿದ್ದು ತೀರಾ ಭಯಭೀತರಾದ ಅವರು ಸ್ಥಳದಿಂದ ಪ್ರಯಾಸದಿಂದ ಪಲಾಯನಗೈದು ಸನಿಹದ ಮನೆಯೊಂದರ ಆವರಣ ಸೇರಿ ಅಪಾಯದಿಂದ ಪಾರಾಗಿ ದ್ದಾರೆ. ಅಲ್ಲಿನ ಚೇಂದ್ರಿಮಾಡ ರವಿ ಪೊನ್ನಪ್ಪ ಹಾಗೂ ರಾಣಿ ಪೊನ್ನಪ್ಪ ಅವರು ದುತ್ತೆಂದು ಎದುರಾದ ಸಲಗದಿಂದ ತಪ್ಪಿಸಿಕೊಂಡು ಅದೃಷ್ಟವ ಶಾತ್ ಪಾರಾಗಿ ದ್ದಾರೆ. ಇವರನ್ನು ಗಮನಿಸಿದ ಆನೆ ಘೀಳಿಟ್ಟಿದ್ದು ಮುಖ್ಯ ರಸ್ತೆ ದಾಟಿ (ಮೊದಲ ಪುಟದಿಂದ) ಗದ್ದೆಯ ಮೂಲಕ ಸಾಗಿದೆ. ಬೆಳಿಗ್ಗೆ ಈ ಸಮಯದಲ್ಲಿ ದಟ್ಟ ಮಂಜು ಆವರಿಸಿದ್ದು ಅಪಾಯದ ಪರಿವೆ ಇಲ್ಲದಂತಾಗಿತ್ತು. ಇದು ಮುಖ್ಯ ರಸ್ತೆಯಾಗಿದ್ದು ವಾಹನದ ಓಡಾಟ, ಶಾಲಾ-ಕಾಲೇಜು ಮಕ್ಕಳು ಹಾಗೂ ಜನತೆ ತಿರುಗಾಡುವ ಪ್ರದೇಶವಾಗಿದ್ದು ಜಾಗೃತೆ ವಹಿಸುವಂತೆ ಅವರುಗಳು ಮನವಿ ಮಾಡಿದ್ದಾರೆ.

ರಾಣಿ ಪೊನ್ನಪ್ಪ ಅವರಿಗೆ ಕಳೆದ ವರ್ಷವೂ ಇದೇ ಮುಖ್ಯ ರಸ್ತೆಯಲ್ಲಿ ಆನೆ ಎದುರಾಗಿ ಅಟ್ಟಿಸಿಕೊಂಡು ಬಂದ ಆನೆಯಿಂದ ಪಾರಾಗಿದ್ದರು. ಈ ಸಂದರ್ಭ ಯಜ್ಞ ಟ್ರಾವರ್ನ್ ಬಳಿ ಈ ಘಟನೆ ನಡೆದಿದ್ದರೆ ಈ ವರ್ಷ ಹೆಗ್ಗಡೆ ಸಮಾಜದ ಎದುರು ಈ ಅಪಾಯ ಎದುರಾಗಿತ್ತು.