ಕುಶಾಲನಗರ, ಮಾ. ೬: ಸಮಾಜ ಸೇವೆ ಮೂಲಕ ರೋಟರಿ ಸಾರ್ಥಕತೆ ಕಂಡುಕೊಳ್ಳುತ್ತಿದೆ ಎಂದು ರೋಟರಿ ಜಿಲ್ಲೆ ೮೧೩೧ ರ ಗವರ್ನರ್ ರಂಗನಾಥ ಭಟ್ ಹೇಳಿದರು.

ಕುಶಾಲನಗರ ರೋಟರಿ ವತಿಯಿಂದ ಸಾರಿಗೆ ಬಸ್ ನಿಲ್ದಾಣದಲ್ಲಿ ರೂ. ೬೫ ಸಾವಿರ ವೆಚ್ಚದಲ್ಲಿ ಅಳವಡಿಸಿರುವ ಸಿಸಿಟಿವಿ ವ್ಯವಸ್ಥೆಯನ್ನು ಉದ್ಘಾಟಿಸಿ ಮಾತನಾಡಿದರು. ನಂತರ ರೋಟರಿ ಹಾಲ್‌ನಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ರೋಟರಿ ಕುಶಾಲನಗರ ಹಾಗೂ ವೈದ್ಯ ಮಹಾವಿದ್ಯಾಲಯದ ದಂತ ವೈದ್ಯರ ಸಹಯೋಗದೊಂದಿಗೆ ಅಂಧತ್ವವುಳ್ಳ ವಿಶೇಷಚೇತನರಿಗೆ ಮೊಬಿಲಿಟಿ ಕೇನ್ ಸ್ಟಿಕ್ ಮತ್ತು ರೇಡಿಯೊಗಳನ್ನು ವಿತರಿಸಲಾಯಿತು. ದಂತ ಕಾಲೇಜಿನ ಹಳೇ ವಿದ್ಯಾರ್ಥಿ ಸಂಘದ ಪರವಾಗಿ ಕುಶಾಲನಗರ ದಂತವೈದ್ಯ ಡಾ. ವಿನಯ್‌ರವರು ದೃಷ್ಟಿ ರಹಿತ ವಿಶೇಷ ಚೇತನರಿಗೆ ವಾಕಿಂಗ್ ಸ್ಟಿಕ್ ಹಾಗೂ ರೇಡಿಯೊ ವಿತರಿಸಿದರು.

ಡಿವೈಎಸ್ಪಿ ಶೈಲೇಂದ್ರ ಹಾಗೂ ವೃತ್ತ ನಿರೀಕ್ಷಕ ಮಹೇಶ್ ಅವರಿಗೆ ರೋಟರಿ ಸೇವಾ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಕ್ರೀಡಾ ವಿಭಾಗದಲ್ಲಿ ಬಾಡಿ ಬಿಲ್ಡರ್ ಅಪ್ಪಣ್ಣ ಅವರನ್ನು ಸನ್ಮಾನಿಸಲಾಯಿತು. ರೋಟರಿ ಅಧ್ಯಕ್ಷರಾದ ಚಂದ್ರಶೇಖರ್ ರವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.

ರೋಟರಿ ಸಹಾಯಕ ಗವರ್ನರ್ ರವಿ, ಕಾರ್ಯಕ್ರಮ ನಿರ್ದೇಶಕ ರವೀಂದ್ರ ರೈ, ರೋಟರಿ ಪದಾಧಿಕಾರಿಗಳಾದ ರಂಗಸ್ವಾಮಿ ಮತ್ತಿತರರು ಇದ್ದರು.