ಸೋಮವಾರಪೇಟೆ, ಮಾ. ೬: ತಾಲೂಕಿನ ಗೌಡಳ್ಳಿ ಗ್ರಾಮದ ಶ್ರೀ ನವದುರ್ಗಾ ಪರಮೇಶ್ವರಿ ದೇವಾಲಯದ ಸರ್ವ ಧರ್ಮ ಕ್ಷೇತ್ರದಲ್ಲಿ ತಾ. ೧೦ ಮತ್ತು ೧೧ ರಂದು ಜಾತ್ರಾ ಮಹೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಮೊಗಪ್ಪ ತಿಳಿಸಿದ್ದಾರೆ.

ಜಾತ್ರೆಯ ಪ್ರಯುಕ್ತ ಪುರುಷರು ಹಾಗೂ ಮಹಿಳೆಯರಿಗೆ ತಾ. ೧೦ರಂದು ಬೆಳಿಗ್ಗೆ ೮.೩೦ಕ್ಕೆ ಗುಡ್ಡಗಾಡು ಓಟದ ಸ್ಪರ್ಧೆ ನಡೆಯಲಿದೆ. ೧೦ಗಂಟೆಗೆ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಗುವುದು. ೧೦.೩೦ಕ್ಕೆ ಪಶುವೈದ್ಯ ಇಲಾಖೆಯ ವತಿಯಿಂದ ಪಶು ಚಿಕಿತ್ಸಾ ಶಿಬಿರ ಹಾಗೂ ಉತ್ತಮ ರಾಸುಗಳಿಗೆ ಬಹುಮಾನ ವಿತರಿಸಲಾಗುವುದು. ೧೧ಕ್ಕೆ ರಂಗೋಲಿ ಸ್ಪರ್ಧೆ, ಮಹಿಳೆಯರಿಗೆ ಬಸ್ ಹುಡುಕಾಟ, ಸಾರ್ವಜನಿಕರು ಮತ್ತು ೧೬ ವರ್ಷ ವರ್ಷದೊಳಗಿನವರಿಗೆ ಜಾನಪದ ಗೀತೆ ಗಾಯನ ಸ್ಪರ್ಧೆ ನಡೆಯಲಿದೆ. ಸಾರ್ವಜನಿಕರಿಗೆ ನಿಧಾನವಾಗಿ ಬೈಕ್ ಚಾಲನಾ ಸ್ಪರ್ಧೆ ಮತ್ತು ಸೈಕಲ್ ಚಾಲನಾ ಸ್ಪರ್ಧೆ ನಡೆಯಲಿದೆ. ೩ಗಂಟೆಗೆ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ನಡೆಯಲಿದೆ ಎಂದು ಮೊಗಪ್ಪ ಮಾಹಿತಿ ನೀಡಿದ್ದಾರೆ. ಸಂಜೆ ೪.೩೦ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕ ಅಪ್ಪಚ್ಚು ರಂಜನ್, ಜಿ.ಪಂ ಸದಸ್ಯ ಬಿ.ಜೆ. ದೀಪಕ್, ತಾ.ಪಂ ಸದಸ್ಯೆ ಕುಸುಮಾ ಅಶ್ವಥ್, ಗ್ರಾ.ಪಂ ಅಧ್ಯಕ್ಷೆ ಕೆ.ಎಂ. ಬಿಂದು, ಗೌಡಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಆರ್. ಸುರೇಶ್, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ನಿರ್ದೇಶಕ ಎಸ್.ಬಿ. ಭರತ್‌ಕುಮಾರ್ ಸೇರಿದಂತೆ ಇತರರು ಪಾಲ್ಗೊಳ್ಳಲಿದ್ದಾರೆ. ಇದೇ ಸಂದರ್ಭ ದೇವಾಲಯ ಸಮಿತಿಯ ಗೌರವಾಧ್ಯಕ್ಷರಾದ ಎಚ್.ಆರ್. ಮುತ್ತಣ್ಣ ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದ್ದಾರೆ.

ತಾ. ೧೧ರಂದು ರಾತ್ರಿ ೮.೩೦ಕ್ಕೆ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಕಾಸರಗೋಡಿನ ಮಲ್ಲಕ್ಷೇತ್ರದ ಶ್ರೀ ದುರ್ಗಾ ಪರಮೇಶ್ವರಿ ಯಕ್ಷಗಾನ ಮೇಳದ ಕಲಾವಿದರಿಂದ ‘ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ’ ಎಂಬ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಲಿದೆ ಎಂದು ಮೊಗಪ್ಪ ಅವರು ಮಾಹಿತಿಯಿತ್ತಿದ್ದಾರೆ.