ಮಡಿಕೇರಿ, ಮಾ ೬: ಪ್ರಸಕ್ತ ಸಾಲಿನಲ್ಲಿ ರಾಜ್ಯ ಸರಕಾರ ಮಂಡಿಸಲಿರುವ ರಾಜ್ಯ ಬಜೆಟ್‌ನಲ್ಲಿ ಕೊಡಗು ಜಿಲ್ಲೆಗೆ ವಿಶೇಷ ಪ್ರಾತಿನಿದ್ಯ ಸಿಗುವಂತಾಗಬೇಕು ಎಂದು ಜಿಲ್ಲಾ ಕಾಂಗ್ರೆಸ್‌ನ ವಕ್ತಾರರಾಗಿ ನೇಮಕಗೊಂಡಿರುವ ಕೇಚಮಾಡ ಸರಿತಾ ಪೂಣಚ್ಚ ಅವರು ಆಗ್ರಹಿಸಿದ್ದಾರೆ.

ತಾ. ೬ರ ಪತ್ರಿಕೆಯಲ್ಲಿ ಬಜೆಟ್ ನಿರೀಕ್ಷೆ - ವಾಸ್ತವದ ಕುರಿತಾಗಿ ಪ್ರಕಟವಾಗಿರುವ ವರದಿಗೆ ಪೂರಕವಾಗಿ ಪ್ರತಿಕ್ರಯಿಸಿ ಹೇಳಿಕೆ ನೀಡಿರುವ ಅವರು ಕೊಡಗು ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದ ದುರಂತ, ಬೆಳೆಗಾರರು -ರೈತರ ಸಂಕಷ್ಟ, ಕಾಡು ಪ್ರಾಣಿಗಳು - ಮಾನವ ಸಂಘರ್ಷ ಸೇರಿದಂತೆ ಹಲವಾರು ಸಮಸ್ಯೆಗಳಿದ್ದು, ಹಲವು ಉದ್ದೇಶಿತ ಯೋಜನೆಗಳೂ ನೆನೆಗುದಿಗೆ ಬಿದ್ದಿವೆ. ಜಿಲ್ಲೆಗೆ ಇಲ್ಲಿನವರೇ ಉಸ್ತುವಾರಿ ಸಚಿವರಾಗುವ ಅವಕಾಶವೂ ಸಿಗುತ್ತಿಲ್ಲ. ಈ ರೀತಿಯಲ್ಲಿ ಹಲವಷ್ಟು ಸಮಸ್ಯೆಗಳಿದ್ದು, ಕೊಡಗಿಗೆ ವಿಶೇಷ ಪ್ಯಾಕೇಜ್ ಘೋಷಣೆಯಾಗಬೇಕು. ಈ ಮೂಲಕ ಕೊಡಗಿಗೆ ಆಗುತ್ತಿರುವ ಅನ್ಯಾಯಗಳನ್ನು ಸರಿಪಡಿಸಬೇಕಿದೆ ಎಂದು ಸರಿತಾ ಅಭಿಪ್ರಾಯಪಟ್ಟಿದ್ದಾರೆ.