ಭಾಗಮಂಡಲ, ಮಾ. ೬: ಸಮೀಪದ ಅಯ್ಯಂಗೇರಿ ಗ್ರಾಮದಲ್ಲಿ ವರ್ಷಂಪ್ರತಿ ವಿಜೃಂಭಣೆಯಿAದ ಆಚರಿಸಿಕೊಂಡು ಬರಲಾಗುತ್ತಿರುವ ಚಿನ್ನತಪ್ಪ ಉತ್ಸವಕ್ಕೆ ಚಾಲನೆ ನೀಡಲಾಯಿತು. ತಾ. ೬ರ ಬೆಳಗ್ಗಿನ ಜಾವ ಶ್ರೀಕೃಷ್ಣನದು ಎನ್ನಲಾದ ಕೊಳಲನ್ನು ದೇವಾಲಯದಿಂದ ಹೊರತೆಗೆದು ನುಡಿಸುವುದರೊಂದಿಗೆ ಹಬ್ಬಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭ ಭಕ್ತರು ಬೆಳಗ್ಗಿನ ಹಬ್ಬದಲ್ಲಿ ಪಾಲ್ಗೊಂಡಿದ್ದರು. ಚಿನ್ನತಪ್ಪ ಹಬ್ಬ ಮೂರು ದಿನಗಳ ಕಾಲ ನಡೆಯಲಿದ್ದು ತಾ. ೭ ರಂದು (ಇಂದು) ಪಟ್ಟಣಿ ಹಬ್ಬ ಜರುಗಲಿದೆ. ಮೊದಲ ದಿನದ ಸಂಜೆ ೬.೩೦ರಿಂದ ಬೆಳಗ್ಗೆ ೪.೩೦ರ ವರೆಗೆ ಸಮೀಪದ ಕಲ್ಲಹೊಳೆಯಲ್ಲಿ ಧಾರೆಪೂಜೆ ನಡೆಯಿತು. ಮಧ್ಯಾಹ್ನ ಉತ್ಸವದ ಸಂದರ್ಭ ಆಕಾಶದಲ್ಲಿ ಗರುಡ ಕಾಣಿಸಿಕೊಳ್ಳುವ ಪ್ರತೀತಿ ಇದೆ. ತಾ. ೮ ರಂದು ಭಂಡಾರ ಹಾಕುವ ಕಾರ್ಯಕ್ರಮ ಜರುಗಲಿದೆ.
ಮೂರು ದಿನಗಳ ಕಾಲ ನಡೆಯುವ ವಿಶಿಷ್ಟ ಚಿನ್ನತಪ್ಪ ಹಬ್ಬದಲ್ಲಿ ಶ್ರೀಕೃಷ್ಣನದು ಎನ್ನಲಾದ ಕೊಳಲಿಗೆ ವಿವಿಧ ವಿಧಿ ವಿಧಾನದೊಂದಿಗೆ ಪೂಜೆ ಸಲ್ಲಿಸುವುದೇ ಹಬ್ಬದ ವಿಶೇಷತೆಯಾಗಿದೆ. ಅಯ್ಯಂಗೇರಿ ಯಲ್ಲಿ ವರ್ಷಕ್ಕೊಮ್ಮೆ ಉತ್ಸವ ನಡೆಯುತ್ತದೆ. ಜಿಲ್ಲೆಯಲ್ಲಿಯೇ ಏಕೈಕ ಕೃಷ್ಣ ದೇಗುಲವಿರುವ ಏಕೈಕ ಗ್ರಾಮ ಎಂಬ ಹೆಗ್ಗಳಿಕೆಯೂ ಇಲ್ಲಿಗಿದೆ. ಗೊಲ್ಲ ಜನಾಂಗದವರು ಹಾಗೂ ಊರಿನ ಇತರ ಜನಾಂಗದವರು ಒಗ್ಗೂಡಿ ನಡೆಸುವ ಈ ಹಬ್ಬ ಪ್ರತಿವರ್ಷ ಮೂರು ದಿನಗಳ ಕಾಲ ವಿವಿಧ ಸಂಪ್ರದಾಯ ದೊಂದಿಗೆ ನೆರವೇರುತ್ತವೆ. ಈ ಸಂದರ್ಭ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
-ಸುನಿಲ್ ಕುಯ್ಯಮುಡಿ